ನವದೆಹಲಿ: ಅದಾನಿ ಸಮೂಹದ ಅಂಬುಜಾ ಸಿಮೆಂಟ್ಸ್ ಲಿಮಿಟೆಡ್ (ಎಸಿಎಲ್) 2023–24ನೇ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ₹1,525 ಕೋಟಿ ನಿವ್ವಳ ಲಾಭ ಗಳಿಸಿದೆ.
2022–23ರ ಇದೇ ಅವಧಿಯಲ್ಲಿ ₹763 ಕೋಟಿ ಲಾಭಗಳಿಸಿತ್ತು. ವರಮಾನವು ₹7,965 ಕೋಟಿಯಿಂದ ₹8,894 ಕೋಟಿಗೆ ಏರಿಕೆಯಾಗಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.
ಕಂಪನಿಯ ವೆಚ್ಚವು ಮಾರ್ಚ್ ತ್ರೈಮಾಸಿಕದಲ್ಲಿ ₹7,741 ಕೋಟಿಯಾಗಿದೆ. ತೆರಿಗೆ ನಂತರದ ಲಾಭವು ₹502 ಕೋಟಿಯಿಂದ ₹532 ಕೋಟಿಗೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಎಸಿಸಿ ಸೇರಿ ಅಂಬುಜಾ ಕಂಪನಿಯ ಸಿಮೆಂಟ್ ಮಾರಾಟವು 1.66 ಕೋಟಿ ಟನ್‌ನಷ್ಟು ಆಗಿದೆ ಎಂದು ಹೇಳಿದೆ.
ಅದಾನಿ ವಿಲ್ಮರ್ ಲಾಭ ಹೆಚ್ಚಳ: ಮಾರ್ಚ್ ತ್ರೈಮಾಸಿಕದಲ್ಲಿ ಅದಾನಿ ವಿಲ್ಮರ್ ಕಂಪನಿಯ ನಿವ್ವಳ ಲಾಭದಲ್ಲಿ ಶೇ 67ರಷ್ಟು ಏರಿಕೆಯಾಗಿದೆ. ಲಾಭವು ₹93 ಕೋಟಿಯಿಂದ ₹156 ಕೋಟಿಗೆ ಹೆಚ್ಚಳವಾಗಿದೆ. ವರಮಾನವು ₹14,185 ಕೋಟಿಯಿಂದ ₹13,342 ಕೋಟಿಗೆ ಏರಿಕೆಯಾಗಿದೆ.
ಆದರೆ, ಕಡಿಮೆ ಆದಾಯದಿಂದ 2023–24ರ ಪೂರ್ಣ ಹಣಕಾಸು ವರ್ಷದಲ್ಲಿ ಲಾಭವು ₹582 ಕೋಟಿಯಿಂದ ₹147 ಕೋಟಿಗೆ ಇಳಿಕೆಯಾಗಿದೆ. ಆದಾಯವು ₹59,148 ಕೋಟಿಯಿಂದ ₹51,555 ಕೋಟಿಗೆ ಕುಸಿದಿದೆ ಎಂದು ಕಂಪನಿ ತಿಳಿಸಿದೆ.
ಎನರ್ಜಿ ಸಲ್ಯೂಷನ್ಸ್ ಲಾಭ ಇಳಿಕೆ: ವೆಚ್ಚದ ಪ್ರಮಾಣ ಹೆಚ್ಚಳದಿಂದಾಗಿ ಅದಾನಿ ಎನರ್ಜಿ ಸಲ್ಯೂಷನ್ಸ್ ಲಾಭದಲ್ಲಿ ಶೇ 13ರಷ್ಟು ಇಳಿಕೆಯಾಗಿದೆ. ₹381 ಕೋಟಿ ನಿವ್ವಳ ಲಾಭ ದಾಖಲಿಸಿದೆ. ವರಮಾನವು ₹3,494 ಕೋಟಿಯಿಂದ ₹4,855 ಕೋಟಿಗೆ ಏರಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ.
ಅದಾನಿ ಪೋರ್ಟ್ಸ್‌ಗೆ ಎಎಎ ರೇಟಿಂಗ್: ಅದಾನಿ ಬಂದರು ಮತ್ತು ವಿಶೇಷ ಆರ್ಥಿಕ ವಲಯವು (ಎಪಿಎಸ್‌ಇಝಡ್) ಕೇರ್ ರೇಟಿಂಗ್ಸ್‌ನಿಂದ ಎಎಎ ರೇಟಿಂಗ್ ಪಡೆದುಕೊಂಡಿದೆ. ಈ ಮಾನ್ಯತೆ ಪಡೆದ ಮೊದಲ ಅತಿದೊಡ್ಡ ಖಾಸಗಿ ಮೂಲ ಸೌಕರ್ಯ ಕಂಪನಿಯಾಗಿದೆ ಎಂದು ಎಪಿಎಸ್‌ಇಝಡ್ ತಿಳಿಸಿದೆ.
ಕಂಪನಿಯು 2023–24ನೇ ಹಣಕಾಸು ವರ್ಷದಲ್ಲಿ 41.99 ಕೋಟಿ ಟನ್ ಸರಕು ಸಾಗಣೆ ಮಾಡಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಾಗಣೆಯಲ್ಲಿ ಶೇ 24ರಷ್ಟು ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.