ನವದೆಹಲಿ: ಇತ್ತೀಚಿನ ಎಲೆಕ್ಟ್ರಿಕ್ ವಾಹನಗಳ ಅಗ್ನಿ ಅವಘಡ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ತಮ್ಮ ಹೊಸ ದ್ವಿಚಕ್ರ ವಾಹನಗಳ ಬಿಡುಗಡೆ ಯೋಜನೆಗಳನ್ನು ಮುಂದೂಡುವಂತೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳ ಸಭೆಯಲ್ಲಿ ಮೌಖಿಕವಾಗಿ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯಾವುದೇ ಒಂದು ವಾಹನಕ್ಕೆ ಬೆಂಕಿ ತಗುಲಿದ ವರದಿ ಬಂದರೆ ಸಂಪೂರ್ಣ ಬ್ಯಾಚ್ನ ವಾಹನಗಳನ್ನು ಹಿಂಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
‘ತನಿಖಾ ವರದಿಗಳ ಆಧಾರದ ಮೇಲೆ ಎಲೆಕ್ಟ್ರಿಕ್ ವಾಹನಗಳಿಗೆ ಹೊಸ ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಹೊಸ ವಾಹನಗಳ ಬಿಡುಗಡೆ ಮುಂದೂಡುವಂತೆ ಮನವಿ ಮಾಡಲಾಗಿದೆ’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು, ಇದರಲ್ಲಿ ವಾಹನ ತಯಾರಕರ ಅಥವಾ ಗ್ರಾಹಕರ ಪ್ರಮಾದ ಇದೆಯೇ’ ಎಂಬ ಕುರಿತು ಸರ್ಕಾರ ಸ್ಪಷ್ಟನೆ ಬಯಸಿದೆ. ತನಿಖಾ ವರದಿಯನ್ನು ಆಧರಿಸಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟ ಕುರಿತು ಹೊಸ ನಿಯಮಾವಳಿ ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಸಚಿವಾಲಯದ ಮನವಿಗೆ ಎಲೆಕ್ಟ್ರಿಕ್ ವಾಹನ ಉತ್ಪಾದಕ ಕಂಪನಿಗಳು ಧನಾತ್ಮಕವಾಗಿ ಸ್ಪಂದಿಸಿದ್ದು, ಸಂಪೂರ್ಣ ಸಹಕಾರದ ಭರವಸೆ ನೀಡಿವೆ ಎಂದು ಅವರು ಹೇಳಿದ್ದಾರೆ.
ಚಾರ್ಜಿಂಗ್ ಸುರಕ್ಷತೆ ಮತ್ತು ಅಗ್ನಿ ಅವಘಡಗಳನ್ನು ತಪ್ಪಿಸುವುದು ಹೇಗೆ? ಎಂಬ ಬಗ್ಗೆ ಗ್ರಾಹಕರಿಗೆ ತಿಳುವಳಿಕೆ ನೀಡುವಂತೆ ಸಚಿವಾಲಯ ಕೋರಿದೆ.
ಅಗ್ನಿ ಅವಘಡಗಳ ಬಳಿಕ ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿಗಳು ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.