ನವದೆಹಲಿ: ಗುಜರಾತ್ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟದ (GCMMF) ಅಮೂಲ್ ಹೈನು ಉತ್ಪನ್ನಗಳು ನವೆಂಬರ್ ಮಾಸಾಂತ್ಯಕ್ಕೆ ಐರೋಪ್ಯ ರಾಷ್ಟ್ರಗಳನ್ನು ಪ್ರವೇಶಿಸಲಿವೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಯೆನ್ ಎಸ್. ಮೆಹ್ತಾ ಸೋಮವಾರ ತಿಳಿಸಿದ್ದಾರೆ.
‘ತಾಜಾ ಹೈನು ಉತ್ಪನ್ನಗಳನ್ನು ಐರೋಪ್ಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ. ಸ್ಪೇನ್‌ನಿಂದ ಆರಂಭಗೊಂಡು ನಂತರ ಇಡೀ ಯುರೋಪ್‌ಗೆ ಉತ್ಪನ್ನಗಳನ್ನು ಪೂರೈಕೆ ಮಾಡುವ ಯೋಜನೆ ಹೊಂದಲಾಗಿದೆ’ ಎಂದಿದ್ದಾರೆ.
‘ವಿದೇಶಿ ಮಾರುಕಟ್ಟೆಯಲ್ಲಿ ಭಾರತದ ಡೈರಿ ಉದ್ಯಮವು ಹಲವು ನಿರ್ಬಂಧಗಳನ್ನು ಎದುರಿಸುತ್ತಿದೆ. ಇದರಿಂದಾಗಿ ಭಾರತೀಯ ಡೈರಿ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವುದು ಕಷ್ಟವಾಗಿದೆ. ಇದನ್ನು ತೆಗೆದುಹಾಕಿದಲ್ಲಿ ಹೈನು ರಫ್ತಿಗೆ ಹೆಚ್ಚಿನ ಅನುಕೂಲವಾಗಲಿದೆ. ಭಾರತದಲ್ಲಿ ಹೈನು ಉದ್ಯಮದ ಮೇಲೆ 10 ಕೋಟಿ ಕುಟುಂಬಗಳು ಅವಲಂಬಿಸಿವೆ. ಬಹಳಷ್ಟು ಜನ ಸಣ್ಣ ಹಾಗೂ ಮಧ್ಯಮ ಹೈನು ಉತ್ಪಾದಕರಾಗಿದ್ದಾರೆ. ಭಾರತವು ಶೇ 30ರ ಅಬಕಾರಿ ಸುಂಕದೊಂದಿಗೆ ಹೈನು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ’ ಎಂದಿದ್ದಾರೆ.
‘36 ಲಕ್ಷ ರೈತರೊಂದಿಗೆ ಅಮೂಲ್ ಒಟ್ಟು ₹80 ಸಾವಿರ ಕೋಟಿ ವಹಿವಾಟು ನಡೆಸುತ್ತಿದೆ. ಆ ಮೂಲಕ ಡೈರಿ ಮಾರುಕಟ್ಟೆಯಲ್ಲಿ ಉತ್ತಮ ಹಿಡಿತ ಹೊಂದಿದೆ’ ಎಂದು ಮೆಹ್ತಾ ಹೇಳಿದ್ದಾರೆ.
ಭಾರತೀಯರು ಹಾಗೂ ಏಷ್ಯಾದವರಿಗಾಗಿಯೇ ಕಳೆದ ಮಾರ್ಚ್‌ನಲ್ಲಿ ನಾಲ್ಕು ವಿಧದ ಹಾಲನ್ನು ಅಮೆರಿಕದಲ್ಲಿ ಅಮೂಲ್ ಬಿಡುಗಡೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.