ADVERTISEMENT

ವೇದಾಂತ ಪುನರ್‌ರಚನೆಗೆ ಒಪ್ಪಿಗೆ

12 ರಿಂದ 15 ತಿಂಗಳುಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ

ಪಿಟಿಐ
Published 29 ಸೆಪ್ಟೆಂಬರ್ 2023, 16:21 IST
Last Updated 29 ಸೆಪ್ಟೆಂಬರ್ 2023, 16:21 IST

ನವದೆಹಲಿ: ಉದ್ಯಮಿ ಅನಿಲ್‌ ಅಗರ್ವಾಲ್‌ ಒಡೆತನದ ವೇದಾಂತ ಲಿಮಿಟೆಡ್‌ ಸಮೂಹದ ವಹಿವಾಟುಗಳನ್ನು ಪುನರ್‌ರಚನೆ ಮಾಡಲು ಆಡಳಿತ ಮಂಡಳಿಯು ಶುಕ್ರವಾರ ಒಪ್ಪಿಗೆ ನೀಡಿದೆ.

ವೇದಾಂತ ಲಿಮಿಟೆಡ್‌ನ ಲೋಹ, ವಿದ್ಯುತ್, ಅಲ್ಯುಮಿನಿಯಂ, ತೈಲ ಮತ್ತು ಅನಿಲ ವಹಿವಾಟುಗಳನ್ನು ಪ್ರತ್ಯೇಕವಾಗಿ ನೋಂದಾಯಿಸಲು ನಿರ್ಧರಿಸಲಾಗಿದೆ.

ವೇದಾಂತ ಲಿಮಿಟೆಡ್‌ನ ಪ್ರತಿ ಒಂದು ಷೇರಿಗೆ ಷೇರುದಾರರು ಹೆಚ್ಚುವರಿಯಾಗಿ 5 ಕಂಪನಿಗಳಲ್ಲಿ ತಲಾ ಒಂದು ಷೇರನ್ನು ಪಡೆಯಲಿದ್ಧಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಈ ಎಲ್ಲ ಪ್ರಕ್ರಿಯೆಗಳಿಗೆ ಷೇರುದಾರರು ಮತ್ತು ಸಾಲದಾತರ ಒಪ್ಪಿಗೆ ಬೇಕಿದೆ. ಷೇರು ವಿನಿಮಯ ಕೇಂದ್ರಗಳು ಮತ್ತು ನ್ಯಾಯಾಲಯದ ಒಪ್ಪಿಗೆಯೂ ಅಗತ್ಯ. ಇವೆಲ್ಲವೂ 12 ರಿಂದ 15 ತಿಂಗಳುಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಮಾಡಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ನಿರ್ದೇಶಕರ ಸಮಿತಿಯು ಕಂಪನಿಯ ನಿರ್ಧಾರವನ್ನು ಕಾರ್ಯಗತಗೊಳಿಸಲು ಸಲಹೆಗಳನ್ನು ನೀಡಲಿದೆ.

ವಹಿವಾಟು ಪುನರ್‌ರಚನೆ ಬಳಿಕ ಹಿಂದುಸ್ತಾನ್‌ ಜಿಂಕ್‌, ಸೆಮಿಕಂಡಕ್ಟರ್‌ ಮತ್ತು ಡಿಸ್‌ಪ್ಲೇ ಹಾಗೂ ಸ್ಟೈನ್‌ಲೆಸ್‌ ಸ್ಟೀಲ್‌ ವಹಿವಾಟುಗಳಲ್ಲಿ ವೇದಾಂತ ಲಿಮಿಟೆಡ್‌ ಶೇ 65ರಷ್ಟು ಷೇರುಪಾಲು ಹೊಂದಲಿದೆ.

ವೇದಾಂತ ಲಿಮಿಟೆಡ್‌ನ ಶೇ 90ಕ್ಕೂ ಅಧಿಕ ಲಾಭವು ಭಾರತದ ಕಾರ್ಯಾಚರಣೆಯಿಂದಲೇ ಬರುತ್ತಿದೆ.

ಕೆಲವೊಂದು ವಹಿವಾಟುಗಳನ್ನು ಪ್ರತ್ಯೇಕಿಸಿ, ನೋಂದಾಯಿಸುವ ಆಯ್ಕೆಗಳನ್ನು ಪರಿಶೀಲಿಸುತ್ತಿರುವುದಾಗಿ ಅನಿಲ್‌ ಅಗರ್ವಾಲ್ ಕಳೆದ ತಿಂಗಳು ಹೇಳಿದ್ದರು.

ಪ್ರತಿ ಕಂಪನಿಯಲ್ಲಿ ಜಾಗತಿಕ ಹೂಡಿಕೆದಾರರು, ರಿಟೇಲ್‌ ಹೂಡಿಕೆದಾರರಿಗೆ ನೇರವಾಗಿ ಬಂಡವಾಳ ಹೂಡಿಕೆ ಮಾಡುವ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದು  ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.