ADVERTISEMENT

ಹಬ್ಬದ ಋತು: ಗೃಹೋಪಯೋಗಿ ಉತ್ಪನ್ನಗಳ ಮಾರಾಟ ಹೆಚ್ಚಳ ನಿರೀಕ್ಷೆ

ಪಿಟಿಐ
Published 11 ಸೆಪ್ಟೆಂಬರ್ 2022, 13:48 IST
Last Updated 11 ಸೆಪ್ಟೆಂಬರ್ 2022, 13:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಈ ಬಾರಿಯ ಹಬ್ಬದ ಋತುವಿನಲ್ಲಿಗೃಹೋಪಯೋಗಿ ಮತ್ತು ಗ್ರಾಹಕ ಬಳಕೆ ಉತ್ಪನ್ನಗಳ ಮಾರಾಟವು ಶೇಕಡ 35ರವರೆಗೆ ಬೆಳವಣಿಗೆ ಕಾಣುವ ನಿರೀಕ್ಷೆಯನ್ನು ಕಂಪನಿಗಳು ಹೊಂದಿವೆ.

ಪ್ರೀಮಿಯಂ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದು ಹಾಗೂ ದರ ಏರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಪ್ರಮಾಣದ ಬೆಳವಣಿಗೆ ನಿರೀಕ್ಷೆ ಮಾಡಿರುವುದಾಗಿ ಕಂಪನಿಗಳು ಹೇಳಿವೆ.

ಈ ಬಾರಿಯ ಹಬ್ಬದ ಋತುವಿನಲ್ಲಿ ಉತ್ಪನ್ನಗಳ ಮಾರಾಟವು ಕಳೆದ ವರ್ಷಕ್ಕಿಂತಲೂ ಉತ್ತಮವಾಗಿರಲಿದ್ದು, ಕೋವಿಡ್‌ ಸಾಂಕ್ರಾಮಿಕ ಬರುವುದಕ್ಕೂ ಹಿಂದಿನ ಮಾರಾಟ ಪ್ರಮಾಣ ಮೀರುವ ನಿರೀಕ್ಷೆ ಇದೆ ಎಂದು ಕಂಪನಿಗಳು ಹೇಳಿವೆ.

ADVERTISEMENT

ಓಣಂ ಮೂಲಕ ಆರಂಭವಾಗುವ ಹಬ್ಬದ ಋತುವು ದೀಪಾವಳಿಗೆ ಕೊನೆಗೊಳ್ಳುತ್ತದೆ. ವಾರ್ಷಿಕವಾಗಿ ಆಗುವ ಉತ್ಪನ್ನಗಳ ಮಾರಾಟದ ಮೌಲ್ಯದ ಮೂರನೆಯ ಒಂದರಷ್ಟು ಈ ಅವಧಿಯಲ್ಲಿ ಆಗುತ್ತದೆ. ಇದು ₹ 75 ಸಾವಿರ ಕೋಟಿ ಇರುವ ಅಂದಾಜು ಮಾಡಲಾಗಿದೆ.

ವಾರಂಟಿ ವಿಸ್ತರಣೆ, ಸುಲಭ ಇಎಂಐ ಸೇರಿದಂತೆ ಗ್ರಾಹಕರನ್ನು ಆಕರ್ಷಿಸಲು ಪ್ರಚಾರದ ಮೇಲೆ ವೆಚ್ಚ ಮಾಡುವ ಕಡೆಗೂ ಕಂಪನಿಗಳು ಗಮನ ಹರಿಸುತ್ತಿವೆ. ಸಣ್ಣ ನಗರಗಳ ಜನರು ಈಗಲೂ ತೀರಾ ಅಗತ್ಯ ಅಲ್ಲದ ವಸ್ತುಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅತಿ ಹೆಚ್ಚು ಬಳಕೆ ಆಗುವ ಉತ್ಪನ್ನಗಳ ಮಾರಾಟದ ಕಡೆಗೆ ಕಂಪನಿಗಳು ಗಮನ ಹರಿಸುತ್ತಿವೆ.

ಈ ಬಾರಿ ಎರಡಂಕಿ ಪ್ರಗತಿ ನಿರೀಕ್ಷೆ ಮಾಡುತ್ತಿರುವುದಾಗಿ ಪ್ಯಾನಸೋನಿಕ್‌ ಲೈಫ್‌ ಸಲ್ಯೂಷನ್ಸ್ ಇಂಡಿಯಾದ ಅಧ್ಯಕ್ಷ ಮನಿಶ್‌ ಶರ್ಮ ಹೇಳಿದ್ದಾರೆ.

‘ದೇಶದಾದ್ಯಂತ ಒಟ್ಟಾರೆಯಾಗಿ ಮುಂಗಾರು ಹೇಗೆ ಸುರಿಯುತ್ತಿದೆ ಮತ್ತು ಗ್ರಾಹಕರ ಖರೀದಿ ಮನಃಸ್ಥಿತಿ ಹೇಗಿದೆ ಎನ್ನುವುದರ ಆಧಾರದ ಮೇಲೆ ಹಬ್ಬದ ಋತುವಿನ ಮಾರಾಟದ ಗುರಿ ನಿಗದಿ ಆಗಲಿದೆ. ಎಲ್ಲಾ ವಿಭಾಗಗಳ ಕಡೆಗೂ ಗಮನ ಹರಿಸಲಿದ್ದೇವೆ’ ಎಂದು ಗೋದ್ರೆಜ್‌ ಅಪ್ಲಯನ್ಸಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಕಮಲ್‌ ನಂದಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.