ADVERTISEMENT

₹50 ಸಾವಿರ ದಾಟಿದ ಅಡಿಕೆ ದರ

ಅಡಿಕೆ ನಾಡಿನಲ್ಲಿ ಬಿಸಿಲ ಬೇಗೆ ಏರುತ್ತಿದ್ದು, ರಾಶಿ ಅಡಿಕೆ ದರ ಪ್ರತಿ ಕ್ವಿಂಟಲ್‌ಗೆ ₹50 ಸಾವಿರ ದಾಟಿರುವುದು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.

ಎಚ್.ವಿ. ನಟರಾಜ್‌
Published 17 ಏಪ್ರಿಲ್ 2024, 2:17 IST
Last Updated 17 ಏಪ್ರಿಲ್ 2024, 2:17 IST
ಚನ್ನಗಿರಿಯ ತುಮ್ಕೋಸ್‌ನಲ್ಲಿರುವ ಅಡಿಕೆ ಚೀಲಗಳು
ಚನ್ನಗಿರಿಯ ತುಮ್ಕೋಸ್‌ನಲ್ಲಿರುವ ಅಡಿಕೆ ಚೀಲಗಳು   

ಚನ್ನಗಿರಿ (ದಾವಣಗೆರೆ ಜಿಲ್ಲೆ): ಅಡಿಕೆ ನಾಡಿನಲ್ಲಿ ಬಿಸಿಲ ಬೇಗೆ ಏರುತ್ತಿದ್ದು, ರಾಶಿ ಅಡಿಕೆ ದರ ಪ್ರತಿ ಕ್ವಿಂಟಲ್‌ಗೆ ₹50 ಸಾವಿರ ದಾಟಿರುವುದು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.

ಕೊಳವೆಬಾವಿಗಳಲ್ಲಿನ ಅಂತರ್ಜಲ ಮಟ್ಟ ಕುಸಿದಿದೆ. ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್‌ ನೀರಿನ ಮೊರೆ ಹೋಗಿರುವ ಬೆಳೆಗಾರರು, ಇದಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದ್ದಾರೆ. ಈ ನಡುವೆಯೇ ಅಡಿಕೆ ಧಾರಣೆಯೂ ಏರಿಕೆಯಾಗಿದೆ.

ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮಾತ್ರ ಮುಂಗಾರು ಪೂರ್ವ ಮಳೆ ಬಿದ್ದಿತ್ತು. ಕೊಳವೆ ಬಾವಿಗಳು ಹಾಗೂ ಕೆರೆ, ಕಟ್ಟೆಗಳು ಬರಿದಾಗಿದ್ದರಿಂದ ತೋಟಗಳನ್ನು ಉಳಿಸಿಕೊಳ್ಳುವ  ದೊಡ್ಡ ಸವಾಲು ಬೆಳೆಗಾರರಿಗೆ ಎದುರಾಗಿತ್ತು. ಇದಕ್ಕಾಗಿ ಕಳೆದ ಒಂದು ತಿಂಗಳಿಂದ ಟ್ಯಾಂಕರ್‌ಗಳ ಮೂಲಕ ನೀರು ತಂದು ಗಿಡಗಳಿಗೆ ಉಣಿಸುವುದು ಸಾಮಾನ್ಯವಾಗಿದೆ.

ADVERTISEMENT

ಅಡಿಕೆಗೆ ಸೂಕ್ತ ದರ ಸಿಗದೆ ಇದ್ದುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಬಿಸಿಲ ತಾಪಕ್ಕೆ ಅಡಿಕೆ ಇಳುವರಿ ಕುಸಿದು ತೀವ್ರ ನಷ್ಟ ಎದುರಿಸುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.

ಜನವರಿ ಹಾಗೂ ಫೆಬ್ರುವರಿಯಲ್ಲಿ ರಾಶಿ ಅಡಿಕೆ ದರ ಕ್ವಿಂಟಲ್‌ಗೆ ₹ 43,000 ಆಸುಪಾಸಿನಲ್ಲಿತ್ತು. ಆದ್ದರಿಂದ ಬೆಳೆಗಾರರು ಮಾರಾಟಕ್ಕೆ ಹಿಂದೇಟು ಹಾಕಿದ್ದರು. ತುಮ್ಕೋಸ್ ಗೋದಾಮುಗಳಲ್ಲಿ ಹಾಗೂ ಮನೆಗಳಲ್ಲಿ ಅಡಿಕೆ ಸಂಗ್ರಹಿಸಿಟ್ಟುಕೊಂಡು ದರ ಏರಿಕೆಯನ್ನು ಎದುರು ನೋಡುತ್ತಿದ್ದರು. 

ಒಂದು ವಾರದಿಂದ ರಾಶಿ ಅಡಿಕೆ ದರ ತುಸು ಏರಿಕೆ ಕಂಡಿದೆ. ಏಪ್ರಿಲ್‌ 15ರಂದು ತುಮ್ಕೋಸ್ ಮಾರುಕಟ್ಟೆಯಲ್ಲಿ ಕ್ವಿಂಟಲ್ ಅಡಿಕೆ ₹ 50,539ಕ್ಕೆ ಮಾರಾಟವಾಗಿದೆ. ಕನಿಷ್ಠ ಬೆಲೆ ₹48,399 ಇದ್ದು, ಬೆಳೆಗಾರರು ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಅಡಿಕೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

‘ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಅಡಿಕೆ ಆಮದು ಸಂಪೂರ್ಣ ಸ್ಥಗಿತಗೊಂಡಿದೆ. ಚಳಿಗಾಲದಲ್ಲಿ ಸ್ಯಾಚೆಟ್‌ಗಳು ಹಸಿಯಾಗಿ ಪಾನ್ ಮಸಾಲ ಹಾಳಾಗುತ್ತದೆ ಎಂಬ ಕಾರಣಕ್ಕೆ ಪಾನ್ ಮಸಾಲ ಕಂಪನಿಗಳು ಉತ್ಪಾದನೆಯ ಗೋಜಿಗೆ ಹೋಗುವುದಿಲ್ಲ. ಬೇಸಿಗೆಯಲ್ಲಿ ಅವು ಉತ್ಪಾದನೆ ಹೆಚ್ಚಿಸುತ್ತವೆ’ ಎಂದು ತುಮ್ಕೋಸ್ ಅಧ್ಯಕ್ಷ ಆರ್.ಎಂ. ರವಿ ತಿಳಿಸಿದರು.

‘ಕಂಪನಿಗಳು ಈಗ ಅಡಿಕೆ ಖರೀದಿಗೆ ಮುಂದಾಗಿರುವುದರಿಂದ ಕ್ವಿಂಟಲ್ ಅಡಿಕೆ ದರ ₹50,000 ದಾಟಿದೆ. ಇನ್ನೂ ಒಂದು ತಿಂಗಳು ಇದೇ ದರ ಮುಂದುವರಿಯುವ ನಿರೀಕ್ಷೆ ಇದೆ. ದರ ಏರಿಕೆಯಿಂದಾಗಿ ಪ್ರತಿದಿನ 1,500 ರಿಂದ 1,800 ಕ್ವಿಂಟಲ್ ಅಡಿಕೆ ಮಾರಾಟವಾಗುತ್ತಿದೆ’ ಎಂದರು. 

ದರ ಕುಸಿತವಾಗಿದ್ದರಿಂದ ಮನೆಯಲ್ಲಿ ಅಡಿಕೆ ಚೀಲಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದೆ. ಸದ್ಯ 35 ಕ್ವಿಂಟಲ್ ಅಡಿಕೆ ಸಂಗ್ರಹ ಇದ್ದು ಮಾರಾಟ ಮಾಡಲು ನಿರ್ಧರಿಸಿದ್ದೇನೆ
–ಚಂದ್ರಶೇಖರ್ ರೈತ ಲಿಂಗದಹಳ್ಳಿ ಚನ್ನಗಿರಿ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.