ADVERTISEMENT

ಎ.ಐ ಪ್ರಭಾವಿಗಳ ‍ಪಟ್ಟಿಯಲ್ಲಿ ಅಶ್ವಿನಿ ವೈಷ್ಣವ್‌, ನಿಲೇಕಣಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 15:36 IST
Last Updated 6 ಸೆಪ್ಟೆಂಬರ್ 2024, 15:36 IST
ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್   

ನ್ಯೂಯಾರ್ಕ್‌: ಅಮೆರಿಕದ ಜನಪ್ರಿಯ ನಿಯತಕಾಲಿಕ ಟೈಮ್ ಬಿಡುಗಡೆ ಮಾಡಿರುವ ‘ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನದ ಭವಿಷ್ಯದ ಮೇಲೆ ಪ್ರಭಾವ ಬೀರಿದ ಜಗತ್ತಿನ 100 ವ್ಯಕ್ತಿಗಳು– 2024ರ ಪಟ್ಟಿ’ಯಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌, ಇನ್ಫೊಸಿಸ್‌ನ ಸಹ ಸಂಸ್ಥಾಪಕ ನಂದನ್‌ ನಿಲೇಕಣಿ ಮತ್ತು ನಟ ಅನಿಲ್‌ ಕಪೂರ್‌ ಸ್ಥಾನ ಪಡೆದಿದ್ದಾರೆ.

ಗುರುವಾರ ಬಿಡುಗಡೆಯಾದ ಈ ಪಟ್ಟಿಯಲ್ಲಿ 15 ಭಾರತೀಯ ಮೂಲದವರಿದ್ದಾರೆ. ಗೂಗಲ್‌ನ ಸುಂದರ್‌ ಪಿಚೈ, ಮೈಕ್ರೊಸಾಫ್ಟ್‌ನ ಸತ್ಯ ನಾದೆಲ್ಲ ಅದರಲ್ಲಿ ಸೇರಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಎ.ಐ ವ್ಯವಸ್ಥೆಗೆ ಅಗತ್ಯವಿರುವ ಸೆಮಿಕಂಡಕ್ಟರ್‌ಗಳ ತಯಾರಿಕಾ ಕ್ಷೇತ್ರದಲ್ಲಿ ಭಾರತ ಕೂಡ ಅಗ್ರ ಐದು ಮುಂಚೂಣಿ ರಾಷ್ಟ್ರಗಳಲ್ಲಿ ಒಂದಾಗಲಿದೆ. ದೇಶ ಆ ನಿಟ್ಟಿನಲ್ಲಿ ದಾಪುಗಾಲು ಹಾಕುವಲ್ಲಿ ಅಶ್ವಿನಿ ವೈಷ್ಣವ್‌ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ.

ಎ.ಐ.ನ ಅನಧಿಕೃತ ಬಳಕೆ ವಿರುದ್ಧದ ಕಾನೂನು ಪ್ರಕರಣದಲ್ಲಿ ಗೆಲುವು ಪಡೆದಿದ್ದಕ್ಕಾಗಿ ಅನಿಲ್‌ ಕಪೂರ್‌, ಸಾರ್ವಜನಿಕ ಡಿಜಿಟಲ್‌ ಮೂಲಸೌಕರ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದಕ್ಕಾಗಿ ನಿಲೇಕಣಿ ಅವರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪರ್ಪ್ಲೆಕ್ಸಿಟಿಯ ಅರವಿಂದ್‌ ಶ್ರೀನಿವಾಸ್‌, ‘ಎ.ಐ ನೌ’ ಕಂಪನಿಯ ಅಂಬಾ ಕಾಕ್‌, ಅಮೆರಿಕ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ವಿಭಾಗದ ನಿರ್ದೇಶಕಿ ಆರತಿ ಪ್ರಭಾಕರ್‌, ಕಲೆಕ್ಟಿವ್‌ ಇಂಟೆಲಿಜೆನ್ಸ್‌ನ ದಿವ್ಯಾ ಸಿದ್ಧಾರ್ಥ್‌ ಅವರ ಹೆಸರೂ ಪಟ್ಟಿಯಲ್ಲಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.