ನವದೆಹಲಿ: 431 ಮೂಲಸೌಕರ್ಯ ಯೋಜನೆಯಗಳ ಅನುಷ್ಠಾನದಲ್ಲಿನ ವಿಳಂಬದಿಂದಾಗಿ ಇವುಗಳ ವೆಚ್ಚವು ₹4.82 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿದೆ ಎಂದು ಅಧಿಕೃತ ವರದಿ ತಿಳಿಸಿದೆ.
ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯದ ಪ್ರಕಾರ, 1,820 ಯೋಜನೆಗಳ ಪೈಕಿ 431 ಯೋಜನೆಗಳ ವೆಚ್ಚ ಹೆಚ್ಚಳವಾಗಿದೆ ಮತ್ತು 848 ಯೋಜನೆಗಳು ವಿಳಂಬವಾಗಿವೆ ಎಂದು ತಿಳಿಸಿದೆ.
1,820 ಯೋಜನೆಗಳ ಅನುಷ್ಠಾನದ ಒಟ್ಟು ಮೂಲ ವೆಚ್ಚ ₹25.87 ಲಕ್ಷ ಕೋಟಿ ಆಗಬಹುದು ಎಂದು ಅಂದಾಜು ಮಾಡಲಾಗಿತ್ತು. ಆದರೆ ಈಗ, ಅವುಗಳು ಪೂರ್ಣಗೊಂಡಾಗ ವೆಚ್ಚವು ₹30.69 ಲಕ್ಷ ಕೋಟಿಗಳಾಗಬಹುದು. ಇದು ಒಟ್ಟಾರೆ ವೆಚ್ಚ ₹4.82 ಲಕ್ಷ ಕೋಟಿ (ಮೂಲ ವೆಚ್ಚದ ಶೇ. 18.65) ಹೆಚ್ಚಳವನ್ನು ತೋರಿಸುತ್ತದೆ ಎಂದು ಸಚಿವಾಲಯದ 2023ರ ಡಿಸೆಂಬರ್‌ನ ವರದಿ ಹೇಳಿದೆ.
202 ಯೋಜನೆಗಳು ಒಂದರಿಂದ 12 ತಿಂಗಳಷ್ಟು ವಿಳಂಬ ಆಗಿದೆ. 200 ಯೋಜನೆಗಳು 13ರಿಂದ 24 ತಿಂಗಳು, 323 ಯೋಜನೆಗಳು 25–60 ತಿಂಗಳು ಮತ್ತು 123 ಯೋಜನೆಗಳು 60 ತಿಂಗಳಿಗೂ ಹೆಚ್ಚು ವಿಳಂಬ ಆಗಿದೆ.
ವರದಿಯ ಪ್ರಕಾರ, ಡಿಸೆಂಬರ್ 2023ರವರೆಗೆ ಈ ಯೋಜನೆಗಳಿಗೆ ಮಾಡಿದ ವೆಚ್ಚವು ₹16.26 ಲಕ್ಷ ಕೋಟಿ. ಇದು ಯೋಜನೆಗಳ ಅಂದಾಜು ವೆಚ್ಚದ ಶೇ 53ರಷ್ಟು.
ಯೋಜನೆ ವಿಳಂಬಕ್ಕೆ ಕಾರಣವೇನು?
ಯೋಜನಾ ಅನುಷ್ಠಾನ ಸಂಸ್ಥೆಗಳ ವರದಿಯಂತೆ ಭೂಸ್ವಾಧೀನದ ವಿಳಂಬ, ಅರಣ್ಯ ಮತ್ತು ಪರಿಸರ ಅನುಮತಿ ನಿಗದಿತ ಸಮಯಕ್ಕೆ ದೊರೆಯದಿರುವುದು, ಯೋಜನೆಗೆ ನೀಡಬೇಕಾದ ಅನುದಾನದಲ್ಲಿನ ವಿಳಂಬ, ಮೂಲಸೌಕರ್ಯ ಮತ್ತು ಸಂಪರ್ಕದ ಕೊರತೆ, ಕಾನೂನು ಸಮಸ್ಯೆಗಳು, ಕೋವಿಡ್‌ನಿಂದ ವಿಧಿಸಿದ ಲಾಕ್‌ಡೌನ್ ಸೇರಿದಂತೆ ವಿವಿಧ ಕಾರಣಗಳು ಯೋಜನೆ ವಿಳಂಬವಾಗಲು ಕಾರಣವಾದ ಅಂಶಗಳಾಗಿವೆ ಎಂದು ವರದಿ ತಿಳಿಸಿದೆ.
ಈ ಪ್ರತಿಯೊಂದು ಯೋಜನೆಯೂ ₹150 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹೂಡಿಕೆಯನ್ನು ಹೊಂದಿವೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.