ADVERTISEMENT

ಇನ್ಫೊಸಿಸ್‌ ವಿದ್ಯಮಾನಗಳ ಬಗ್ಗೆ ದೇವರನ್ನೇ ಕೇಳಿ: ‘ಸೆಬಿ’ ಮುಖ್ಯಸ್ಥ ತ್ಯಾಗಿ

ಪ್ರತಿಕ್ರಿಯೆ

ಪಿಟಿಐ
Published 8 ನವೆಂಬರ್ 2019, 20:29 IST
Last Updated 8 ನವೆಂಬರ್ 2019, 20:29 IST
ಅಜಯ್‌ ತ್ಯಾಗಿ
ಅಜಯ್‌ ತ್ಯಾಗಿ   

ಮುಂಬೈ: ‘ಐ.ಟಿ ಸಂಸ್ಥೆ ಇನ್ಫೊಸಿಸ್‌ನಲ್ಲಿ ನಡೆದಿದೆ ಎನ್ನಲಾದ ಲೆಕ್ಕಪತ್ರ ಅಕ್ರಮಗಳ ಅನಾಮಧೇಯ ದೂರುಗಳ ಕುರಿತ ತನಿಖೆ ಪ್ರಗತಿಯಲ್ಲಿ ಇದೆ’ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ಅಧ್ಯಕ್ಷ ಅಜಯ್ ತ್ಯಾಗಿ ಹೇಳಿದ್ದಾರೆ.

‘ಇನ್ಫೊಸಿಸ್‌ನಲ್ಲಿನ ಲೆಕ್ಕಪತ್ರಗಳ ಪಾರದರ್ಶಕತೆ ಬಗ್ಗೆ ನೀವು ನಂದನ್‌ ನಿಲೇಕಣಿ ಅಥವಾ ದೇವರನ್ನೇ ಕೇಳಿ’ ಎಂದು ಅವರು ಸುದ್ದಿಗಾರರಿಗೆ ಮರುಪ್ರಶ್ನಿಸಿದ ಘಟನೆ ಶುಕ್ರವಾರ ಇಲ್ಲಿ ನಡೆಯಿತು.

‘ಸಂಸ್ಥೆಯಲ್ಲಿನ ಲೆಕ್ಕಪತ್ರಗಳನ್ನು ನಿರ್ವಹಿಸುವ ವಿಧಾನದ ಸ್ವರೂಪ ಸದೃಢ ಮತ್ತು ಸಂಪೂರ್ಣ ಪಾರದರ್ಶಕವಾಗಿದೆ. ದೇವರು ಕೂಡ ಅಂಕಿ ಅಂಶಗಳನ್ನು ತಿರುಚಲು ಸಾಧ್ಯವಿಲ್ಲ’ ಎಂದು ಇನ್ಫೊಸಿಸ್‌ನ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ಅವರು ನೀಡಿದ ಹೇಳಿಕೆಗೆ ತ್ಯಾಗಿ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

ADVERTISEMENT

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಏರ್ಪಡಿಸಿದ್ದ ಸಮಾರಂಭದ ಸಂದರ್ಭದಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.

‘ಹೂಡಿಕೆದಾರರು ಈ ವಿಷಯದಲ್ಲಿ ಸ್ವತಃ ನಿರ್ಣಯಕ್ಕೆ ಬರಬೇಕು. ನಮ್ಮಿಂದ ಏನು ಸಾಧ್ಯವಿದೆಯೋ ಅದನ್ನು ಮಾಡುತ್ತೇವೆ. ತನಿಖೆಯ ಫಲಶ್ರುತಿಯು ನಿಮಗೂ ಗೊತ್ತಾಗಲಿದೆ’ ಎಂದರು.

‘ಇನ್ಫೊಸಿಸ್‌ನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಅಮೆರಿಕದ ಸೆಕ್ಯುರಿಟೀಸ್‌ ಎಕ್ಸ್‌ಚೇಂಜ್‌ ಕಮಿಷನ್‌ (ಎಸ್‌ಇಸಿ) ಜತೆ ‘ಸೆಬಿ’ ಮಾಹಿತಿ ಹಂಚಿಕೊಂಡಿದೆಯೇ’ ಎನ್ನುವ ಪ್ರಶ್ನೆಗೆ, ಉತ್ತರಿಸಲು ನಿರಾಕರಿಸಿದ ಅವರು, ‘ಎರಡೂ ನಿಯಂತ್ರಣ ಸಂಸ್ಥೆಗಳ ನಡುವಣ ಮಾಹಿತಿ ವಿನಿಮಯ ಗೋಪ್ಯವಾಗಿರಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.