ಬೆಂಗಳೂರು: ಷೇರುಪೇಟೆಗಳ ಬಂಡವಾಳ ಮೌಲ್ಯ ಏರಿಕೆ ಕಾಣುತ್ತಿರುವುದು ಆತಂಕ ಮೂಡಿಸುತ್ತಿದೆ. ಬಂಡವಾಳ ಮೌಲ್ಯವು ಗರಿಷ್ಠ ಮಟ್ಟದಲ್ಲಿ ಇದ್ದಾಗ ಕೆಲವು ನಕಾರಾತ್ಮಕ ಅಂಶಗಳು ಭಾರಿ ಕುಸಿತಕ್ಕೆ ಕಾರಣವಾಗಬಹುದು. ಷೇರುಪೇಟೆಗಳಲ್ಲಿ ಶುಕ್ರವಾರ ನಡೆದ ನಕಾರಾತ್ಮಕ ವಹಿವಾಟು ಇದಕ್ಕೆ ಉತ್ತಮ ನಿದರ್ಶನವಾಗಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ತಿಳಿಸಿದ್ದಾರೆ.
ಇನ್ಫೊಸಿಸ್ ಮತ್ತು ಎಚ್‌ಯುಎಲ್ ಸಂಬಂಧಿಸಿದ ನಕಾರಾತ್ಮಕ ಸುದ್ದಿಗಳಿಂದಾಗಿ ಶುಕ್ರವಾರ ಸೆನ್ಸೆಕ್ಸ್ 887 ಅಂಶ ಕುಸಿತ ಕಾಣುವಂತಾಯಿತು ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ. ಇನ್ಫೊಸಿಸ್ ಕಂಪನಿಯು ಪ್ರಸಕ್ತ ಹಣಕಾಸು ವರ್ಷಕ್ಕೆ ತನ್ನ ವರಮಾನದ ಮುನ್ನೋಟದಲ್ಲಿ ಭಾರಿ ಕಡಿತ ಮಾಡಿದೆ. ಇನ್ನೊಂದೆಡೆ ಎಚ್‌ಯುಎಲ್‌ನ ನಿವ್ವಳ ಲಾಭವು ಮಾರುಕಟ್ಟೆ ನಿರೀಕ್ಷೆಗಿಂತಲೂ ಕಡಿಮೆ ಆಗಿದೆ.
ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಜುಲೈನಲ್ಲಿ ಭಾರತದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಿದ್ದಾರೆ. ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್) ಇರುವ ಮಾಹಿತಿಯ ಪ್ರಕಾರ, ಜುಲೈ 21ರವರೆಗೆ ನಡೆದಿರುವ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು ₹43,804 ಕೋಟಿ ಹೂಡಿಕೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹಣಕಾಸು, ಆಟೊಮೊಬೈಲ್, ಬಂಡವಾಳ ಸರಕುಗಳು, ರಿಯಾಲ್ಟಿ ಮತ್ತು ಎಫ್‌ಎಂಸಿಜಿ ವಲಯಗಳಲ್ಲಿ ಹೂಡಿಕೆಯನ್ನು ಮುಂದುವರಿಸಿದ್ದಾರೆ. ಇದರಿಂದಾಗಿ ಈ ವಲಯದ ಷೇರುಗಳ ಮೌಲ್ಯದಲ್ಲಿ ಏರಿಕೆ ಕಾರಣವಾಗಿದ್ದು, ಆ ಮೂಲಕ ಸೆನ್ಸೆಕ್ಸ್, ನಿಫ್ಟಿಯು ದಾಖಲೆ ಮಟ್ಟದಲ್ಲಿ ವಹಿವಾಟು ನಡೆಸಲು ನೆರವಾಗಿದೆ ಎಂದು ವಿಜಯಕುಮಾರ್ ಹೇಳಿದ್ದಾರೆ.
ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್‌ಐಐ) (ಕೋಟಿಗಳಲ್ಲಿ)
ಜುಲೈ 17;₹73
ಜುಲೈ 18;₹2,116
ಜುಲೈ 19;₹1,165
ಜುಲೈ 20;₹3,371
ಜುಲೈ 21;₹1,999 ಮಾರಾಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.