ADVERTISEMENT

ವಿಮಾನ ಇಂಧನ ದರ ಶೇ 18ರಷ್ಟು ಹೆಚ್ಚಳ; ಕಿಲೋ ಲೀಟರ್‌ಗೆ ₹1 ಲಕ್ಷಕ್ಕೂ ಅಧಿಕ

ಪಿಟಿಐ
Published 16 ಮಾರ್ಚ್ 2022, 10:58 IST
Last Updated 16 ಮಾರ್ಚ್ 2022, 10:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿಮಾನ ಇಂಧನ (ಜೆಟ್‌ ಇಂಧನ) ದರವನ್ನು ಬುಧವಾರ ಶೇಕಡ 18ರಷ್ಟು ಏರಿಕೆ ಮಾಡಲಾಗಿದೆ. ಸಾರ್ವಕಾಲಿಕ ಗರಿಷ್ಠ ಪ್ರಮಾಣದ ಏರಿಕೆ ಇದಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಗೆ ಅನುಗುಣವಾಗಿ ವಿಮಾನ ಇಂಧನ ದರದಲ್ಲಿ ಹೆಚ್ಚಳ ಮಾಡಲಾಗಿದೆ. ಈ ವರ್ಷದಲ್ಲಿ ಸತತ ಆರನೇ ಬಾರಿಗೆ ವಿಮಾನ ಇಂಧನ ದರ ಏರಿಕೆಯಾಗಿದೆ. ಹೀಗಾಗಿ ಇದೇ ಮೊದಲ ಬಾರಿಗೆ ಕಿಲೋ ಲೀಟರ್‌ ಬೆಲೆಯು ₹1 ಲಕ್ಷವನ್ನು ದಾಟಿದೆ.

ಈ ವರ್ಷದ ಜನವರಿ1ರಿಂದ ಬುಧವಾರದವರೆಗೆ ಒಟ್ಟು ಆರು ಬಾರಿ ಬೆಲೆ ಹೆಚ್ಚಳ ಮಾಡಲಾಗಿದ್ದು, ಈ ಅವಧಿಯಲ್ಲಿ ಬೆಲೆ ಏರಿಕೆಯು ₹36,643.88 ರಷ್ಟಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ಅಧಿಸೂಚನೆಯ ಪ‍್ರಕಾರ, ದೆಹಲಿಯಲ್ಲಿ ವಿಮಾನ ಇಂಧನ ದರವು ಪ್ರತಿ ಕಿಲೋ ಲೀಟರಿಗೆ ₹17,135.63ರಷ್ಟು (ಶೇ 18.3) ಹೆಚ್ಚಿಸಲಾಗಿದೆ. ಇದರಿಂದ ಪ್ರತಿ ಕಿಲೋ ಲೀಟರ್‌ ದರವು ₹1,10,666.29 ಕ್ಕೆ ಏರಿಕೆ ಆಗಿದೆ.

ADVERTISEMENT

ಬುಧವಾರದ ದರ ಏರಿಕೆಯಿಂದಾಗಿ ವಿಮಾನ ಇಂಧನ ದರವು ಮುಂಬೈನಲ್ಲಿ ₹1,09,119.83, ಕೋಲ್ಕತ್ತದಲ್ಲಿ ₹1,14,979.70, ಚೆನ್ನೈನಲ್ಲಿ ₹1,14,133.73ಕ್ಕೆ ತಲುಪಿದೆ.

ರಷ್ಯಾ–ಉಕ್ರೇನ್‌ ಸಂಘರ್ಷದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಕಳೆದ ವಾರ ಬ್ಯಾರಲ್‌ಗೆ 140 ಡಾಲರ್‌ಗಳ ಸಮೀಪಕ್ಕೆ ತಲುಪಿತ್ತು. ಆ ಬಳಿಕ ಬ್ಯಾರಲ್‌ಗೆ 100 ಡಾಲರ್‌ಗಳ ಆಸುಪಾಸಿಗೆ ಬಂದಿದೆ.

ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಈ ಎರಡು ತೈಲೋತ್ಪನ್ನಗಳ ಬೆಲೆಯನ್ನು 132 ದಿನಗಳಿಂದ ಬದಲಾವಣೆ ಮಾಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.