ADVERTISEMENT

ಅಟ್ಲಾಸ್ ಫೈವ್ ಪ್ರಾರಂಭಿಸಿದ ಈಟನ್ ಸಲ್ಯೂಷನ್ಸ್

ಕುಟುಂಬದ ಕಚೇರಿಗಳ ಸಂಪತ್ತು ನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 16:29 IST
Last Updated 11 ಜುಲೈ 2024, 16:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಕುಟುಂಬದ ಕಚೇರಿಗಳಿಗೆ (ಫ್ಯಾಮಿಲಿ ಆಫೀಸ್‌) ಕ್ಲೌಡ್-ಆಧಾರಿತ ಸೇವೆ ಒದಗಿಸುವ ಈಟನ್ ಸಲ್ಯೂಷನ್ಸ್ ಕಂಪನಿಯು, ಭಾರತದಲ್ಲಿನ ಕುಟುಂಬದ ಕಚೇರಿಗಳ ಸಂಪತ್ತು ನಿರ್ವಹಣೆಗಾಗಿ ಅಟ್ಲಾಸ್ ಫೈವ್ ವೇದಿಕೆಯನ್ನು ಆರಂಭಿಸಿದೆ.

ಇನ್ಫೊಸಿಸ್‌ನ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರ ಕುಟುಂಬ ಕಚೇರಿ ಆಗಿರುವ ‘ಕ್ಯಾಟಮರಾನ್’ ತನ್ನ ಮೊದಲ ಗ್ರಾಹಕನಾಗಿದೆ ಎಂದು ತಿಳಿಸಿದೆ.

ಅಮೆರಿಕದ ಉತ್ತರ ಕೆರೊಲಿನಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಈಟನ್ ಸಲ್ಯೂಷನ್ಸ್, ಕಳೆದ 5 ವರ್ಷಗಳಿಂದ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 300ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. 

ADVERTISEMENT

ಈ ವೇದಿಕೆಯು ಸಂಪೂರ್ಣ ಸುರಕ್ಷಿತವಾದ ಕ್ಲೌಡ್ ಆಧಾರಿತ ಕೃತಕ ಬುದ್ಧಿಮತ್ತೆ ಚಾಲಿತ ತಂತ್ರಾಂಶ ಹೊಂದಿದೆ. ಕುಟುಂಬದ ಕಚೇರಿಗಳ ಅಗತ್ಯತೆ ಪೂರೈಸಲೆಂದೇ ವಿನ್ಯಾಸಗೊಳಿಸಲಾಗಿದೆ. ಈ ವೇದಿಕೆ ಪ್ರಸ್ತುತ ವಿಶ್ವದಾದ್ಯಂತ 665 ಕುಟುಂಬಗಳ ₹65 ಲಕ್ಷ ಕೋಟಿಗೂ ಅಧಿಕ ಸಂಪತ್ತನ್ನು ನಿರ್ವಹಣೆ ಮಾಡುತ್ತಿದೆ.

ಈ ವೇದಿಕೆಯಲ್ಲಿ 92,000 ಘಟಕಗಳಿದ್ದು, ವಾರ್ಷಿಕವಾಗಿ 1.15 ಕೋಟಿ ವಹಿವಾಟು ನಡೆಸಲಾಗುತ್ತದೆ. ಈ ವೇದಿಕೆ ಕುಟುಂಬದ ಕಚೇರಿಯ ಎಲ್ಲಾ ಕೆಲಸಗಳನ್ನು ಉತ್ತಮವಾಗಿ ಕಾರ್ಯಾಚರಣೆ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ.

‘ಹೆಚ್ಚು ಶತಕೋಟ್ಯಧಿಪತಿಗಳನ್ನು ಹೊಂದಿರುವ ಭಾರತವು ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಈಟನ್ ಸಲ್ಯೂಷನ್ಸ್‌ನ ಅಂತರರಾಷ್ಟ್ರೀಯ ಮಟ್ಟದ ವಿಸ್ತರಣಾ ಯೋಜನೆಗಳ ಜೊತೆಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಜಾಗತಿಕ ಬೆಳವಣಿಗೆಯ ಕಾರ್ಯತಂತ್ರದಲ್ಲಿ ಭಾರತವು ಬಹಳ ಮಹತ್ವದ ಮತ್ತು ನಿರ್ಣಾಯಕ ಮಾರುಕಟ್ಟೆಯಾಗಿದೆ’ ಎಂದು ಈಟನ್ ಸಲ್ಯೂಷನ್ಸ್‌ನ ಕಾರ್ಯ ನಿರ್ವಾಹಕ ಅಧ್ಯಕ್ಷ ಸತ್ಯೇನ್ ಪಟೇಲ್ ತಿಳಿಸಿದ್ದಾರೆ.

‘ಜಾಗತಿಕ ಗ್ರಾಹಕರಿಗೆ ಮತ್ತಷ್ಟು ಉತ್ತಮವಾಗಿ ಸೇವೆ ಸಲ್ಲಿಸಲು ಈಟನ್ ಸಲ್ಯೂಷನ್ಸ್ ಮುಂದಿನ ದಿನಗಳಲ್ಲಿ ಗುಜರಾತಿನ ಗಿಫ್ಟ್ ಸಿಟಿಯಲ್ಲಿ ತನ್ನ ಹೊಸ ಕೇಂದ್ರ ತೆರೆಯುವ ಗುರಿ ಹೊಂದಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.