ನವದೆಹಲಿ: ಮೂರು ವರ್ಷಗಳ ಬಳಿಕ ದೇಶದಲ್ಲಿ ವಾಹನ ಪ್ರದರ್ಶನ ಮೇಳೆ ಮತ್ತೆ ನಡೆಯಲಿದೆ. ಆದರೆ, ಕೆಲವು ಪ್ರಮುಖ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸುತ್ತಿಲ್ಲ.
ಗ್ರೇಟರ್ ನೊಯಿಡಾದಲ್ಲಿ ಇದೇ 11ರಿಂದ ಆರಂಭವಾಗುವ ಮೇಳದಲ್ಲಿ ಪ್ರಮುಖ ಕಂಪನಿಗಳಾದ ಮಾರುತಿ ಸುಜುಕಿ, ಹುಂಡೈ, ಟಾಟಾ ಮೋಟರ್ಸ್, ಕಿಯಾ ಇಂಡಿಯಾ, ಟೊಯೋಟ ಕಿರ್ಲೋಸ್ಕರ್ ಮತ್ತು ಎಂಜಿ ಮೋಟರ್ ಇಂಡಿಯಾ ಭಾಗವಹಿಸಲಿವೆ. ಮಹೀಂದ್ರ ಆ್ಯಂಡ್ ಮಹಿಂದ್ರ, ಸ್ಕೋಡಾ, ಫೋಕ್ಸ್‌ವ್ಯಾಗನ್, ನಿಸಾನ್, ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯು ಮತ್ತು ಔಡಿ ಕಂಪನಿಗಳು ಮೇಳದಿಂದ ದೂರ ಉಳಿಯಲಿವೆ.
ಈ ಮೇಳದಲ್ಲಿ ಜಾಗತಿಕ ಮಾರುಕಟ್ಟೆಗೆ ಐದು ವಾಹನಗಳು ಬಿಡುಗಡೆ ಆಗಲಿದ್ದು 75 ವಾಹನಗಳು ಅನಾವರಣಗೊಳ್ಳಲಿವೆ. 48 ವಾಹನ ತಯಾರಕರನ್ನೂ ಒಳಗೊಂಡು ಒಟ್ಟು 80 ಕಂಪನಿಗಳು ಭಾಗವಹಿಸಲಿವೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟದ (ಎಸ್‌ಐಎಎಂ) ಅಧಿಕಾರಿಗಳು ತಿಳಿಸಿದ್ದಾರೆ.
ಹೀರೊ ಮೊಟೊಕಾರ್ಪ್, ಬಜಾಜ್ ಆಟೊ ಮತ್ತು ಟಿವಿಎಸ್ ಮೋಟರ್ ಕಂಪನಿಗಳಿಗೆ ಎಥೆನಾಲ್ ಪೆವಿಲಿಯನ್‌ನಲ್ಲಿ ತಮ್ಮ ಫ್ಲೆಕ್ಸ್ ಫ್ಯೂಯೆಲ್ ಮಾದರಿಯ ವಾಹನಗಳನ್ನು ಮಾತ್ರವೇ ಪ್ರದರ್ಶನಕ್ಕೆ ಇಡುವಂತೆ ಮಿತಿ ಹೇರಲಾಗಿದೆ.
ಮಾಧ್ಯಮದವರ ಭಾಗವಹಿಸುವಿಕೆಗೆ 11 ಮತ್ತು 12ರಂದು ಅವಕಾಶ ನೀಡಲಾಗಿದೆ. ವಾಹನ ಮೇಳವು 13ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದ್ದು, 18ಕ್ಕೆ ಕೊನೆಗೊಳ್ಳಲಿದೆ.
ವಾಹನ ಪ್ರದರ್ಶನ ಮೇಳಕ್ಕೆ ಬರುವವರು ಐಷಾರಾಮಿ ಉತ್ಪನ್ನಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವುದಿಲ್ಲ. ಹೀಗಾಗಿ ಈ ಬಾರಿ ಮೇಳದಲ್ಲಿ ಭಾಗವಹಿಸದಿರಲು ನಿರ್ಧರಿಸಲಾಗಿದೆ ಎಂದು ಮರ್ಸಿಡಿಸ್ ಬೆಂಜ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಅಯ್ಯರ್ ಹೇಳಿದ್ದಾರೆ.
ಭಾರತದಲ್ಲಿ ಉತ್ಪನ್ನಗಳನ್ನು ಪರಿಚಯಿಸಲು ತನ್ನದೇ ಆದ ಸಮಯವನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಹೀಗಾಗಿ ಮೇಳದಲ್ಲಿ ಭಾಗವಹಿಸುತ್ತಿಲ್ಲ ಎಂದು ಸ್ಕೋಡಾ ಆಟೊ ಇಂಡಿಯಾದ ನಿರ್ದೇಶಕ ಪೀಟರ್ ಸೋಲ್ಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.