ನವದೆಹಲಿ: ಹಳೆಯ ವಾಹನವನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿಸುವವರಿಗೆ ಈ ಹಬ್ಬದ ಋತುವಿನಲ್ಲಿ ಶೇ 1.5ರಿಂದ ಶೇ 3ರಷ್ಟು ರಿಯಾಯಿತಿ ನೀಡುವುದಾಗಿ ಆಟೊಮೊಬೈಲ್ ಕಂಪನಿಗಳು ಘೋಷಿಸಿವೆ.
ಈ ಸೌಲಭ್ಯ ಪಡೆಯಲು ಖರೀದಿದಾರರು ಹಳೆಯ ವಾಹನವನ್ನು ಗುಜರಿಗೆ ಹಾಕಿದ ನಂತರ ಪ್ರಮಾಣ ಪತ್ರ ಪಡೆಯಬೇಕಿದೆ. ಅಂತಹ ಖರೀದಿದಾರರಿಗೆ ಈ ಸೌಲಭ್ಯ ಕಲ್ಪಿಸಲು ಮುಂದಾಗಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಭಾರತೀಯ ವಾಹನ ತಯಾರಕರ ಒಕ್ಕೂಟದ ಪ್ರತಿನಿಧಿಗಳ ನಿಯೋಗದ ಜೊತೆಗೆ ಮಂಗಳವಾರ ಗಡ್ಕರಿ ಮಾತುಕತೆ ನಡೆಸಿದರು.
ರಿಯಾಯಿತಿ ಎಷ್ಟು?:
ಮರ್ಸಿಡಿಸ್ ಬೆಂಜ್ ಇಂಡಿಯಾ ₹25 ಸಾವಿರ ರಿಯಾಯಿತಿ ಪ್ರಕಟಿಸಿದೆ.
ವಾಣಿಜ್ಯ ವಾಹನಗಳ ತಯಾರಕರು ಎರಡು ವರ್ಷದ ವರೆಗೆ ಹಾಗೂ ಪ್ರಯಾಣಿಕ ವಾಹನ ತಯಾರಕರು ಒಂದು ವರ್ಷದ ವರೆಗೆ ರಿಯಾಯಿತಿ ನೀಡಲು ಸಮ್ಮತಿಸಿವೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಪ್ರಯಾಣಿಕ ವಾಹನ ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ ಇಂಡಿಯಾ, ಟಾಟಾ ಮೋಟರ್ಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಹುಂಡೈ ಮೋಟರ್ಸ್ ಇಂಡಿಯಾ, ಕಿಯಾ ಮೋಟರ್ಸ್, ಟೊಯೆಟೊ, ಹೋಂಡಾ ಕಾರ್ಸ್, ಜೆಎಸ್‌ಡಬ್ಲ್ಯು ಎಂಜಿ ಮೋಟರ್ಸ್, ರೆನಾಲ್ಟ್ ಇಂಡಿಯಾ, ನಿಸಾನ್ ಇಂಡಿಯಾ, ಸ್ಕೋಡ, ವೋಕ್ಸ್‌ವ್ಯಾಗನ್ ಇಂಡಿಯಾ ಎಕ್ಸ್ ಷೋರೂಂ ಬೆಲೆಯಲ್ಲಿ ಶೇ 1.5ರಷ್ಟು ಅಥವಾ ₹20 ಸಾವಿರ ರಿಯಾಯಿತಿ ನೀಡಲಿವೆ ಎಂದು ತಿಳಿಸಿದೆ.
ವಾಣಿಜ್ಯ ವಾಹನ ತಯಾರಿಸುವ ಟಾಟಾ ಮೋಟರ್ಸ್, ವೋಲ್ವೊ ಐಷರ್, ಅಶೋಕ್ ಲೇಲ್ಯಾಂಡ್, ಮಹೀಂದ್ರ ಆ್ಯಂಡ್ ಮಹೀಂದ್ರ, ಫೋರ್ಸ್ ಮೋಟರ್ಸ್, ಇಸುಜು ಮೋಟರ್ಸ್, ಎಸ್‌ಎಂಎಲ್ ಇಸುಜು ಕಂಪನಿಯು ಶೇ 3ರಷ್ಟು ರಿಯಾಯಿತಿ ಪ್ರಕಟಿಸಿವೆ. ವಾಣಿಜ್ಯ ಸರಕು ಸಾಗಣೆ ವಾಹನಗಳ ದರದಲ್ಲಿ ಶೇ 3.5ರಷ್ಟು ರಿಯಾಯಿತಿ ಘೋಷಿಸಿವೆ. ಈ ಯೋಜನೆಯು ಬಸ್‌ಗಳು ಮತ್ತು ವ್ಯಾನ್‌ಗಳಿಗೂ ಅನ್ವಯವಾಗುವ ಸಾಧ್ಯತೆಯಿದೆ ಎಂದು ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.