ಬೆಂಗಳೂರು: ಸ್ವಯಂಚಾಲನೆಯಂತಹ ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಿಣತರಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಐ.ಟಿ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚುತ್ತಿವೆ.
ಐ.ಟಿ ಕ್ಷೇತ್ರದ ಮುಂಚೂಣಿ ಸಂಸ್ಥೆಗಳಾದ ಟಿಸಿಎಸ್, ಇನ್ಫೊಸಿಸ್, ವಿಪ್ರೊ, ಎಚ್‌ಸಿಎಲ್ ಮತ್ತು ಟೆಕ್ ಮಹೀಂದ್ರಾ ಸಂಸ್ಥೆಗಳಲ್ಲಿ 2018–19ರಲ್ಲಿ ಒಟ್ಟಾರೆ 90,964 ತಂತ್ರಜ್ಞರನ್ನು ಹೊಸದಾಗಿ ನೇಮಿಸಿಕೊಳ್ಳಲಾಗಿದೆ. ನೇಮಕಾತಿಗಳ ವಾರ್ಷಿಕ ಏರಿಕೆಯು ಶೇ 9.2ರಷ್ಟು ದಾಖಲಾಗಿದೆ.
2017–18ರಲ್ಲಿನ ಉದ್ಯೋಗ ಅವಕಾಶಗಳಿಗೆ ಹೋಲಿಸಿದರೆ ಈ ಬಾರಿಯದು ಗಮನಾರ್ಹ ಚೇತರಿಕೆಯಾಗಿದೆ.
ದೇಶದ ಅತಿದೊಡ್ಡ ಐ.ಟಿ ಸಂಸ್ಥೆಯಾಗಿರುವ ಟಿಸಿಎಸ್, ಹಿಂದಿನ ವರ್ಷ 29,287 ತಂತ್ರಜ್ಞರನ್ನು ನೇಮಿಸಿಕೊಂಡಿದೆ. ಇನ್ಫೊಸಿಸ್‌ಗೆ 24,016 ತಂತ್ರಜ್ಞರು ಸೇರ್ಪಡೆಗೊಂಡಿದ್ದಾರೆ. ಇದು ಹಿಂದಿನ ವರ್ಷದ ನೇಮಕಕ್ಕೆ ಹೋಲಿಸಿದರೆ 10 ಪಟ್ಟು ಹೆಚ್ಚಳ ದಾಖಲಿಸಿದೆ.
ವಿಪ್ರೊ ಮತ್ತು ಟೆಕ್ ಮಹೀಂದ್ರಾ ಸಂಸ್ಥೆಗಳು 2017–18ರಲ್ಲಿ ಹೊಸ ನೇಮಕಾತಿಗೆ ಕಡಿವಾಣ ವಿಧಿಸಿದ್ದವು. 2018–19ರಲ್ಲಿ ಈ ಎರಡೂ ಸಂಸ್ಥೆಗಳು ಹೊಸ ನೇಮಕಾತಿಗೆ ಆದ್ಯತೆ ನೀಡಿ ಕ್ರಮವಾಗಿ 11,502 ಮತ್ತು 8,275 ಹೊಸಬರನ್ನು ನೇಮಕ ಮಾಡಿಕೊಂಡಿವೆ.
‘ತಂತ್ರಜ್ಞಾನವು ತ್ವರಿತವಾಗಿ ಬದಲಾಗುತ್ತಿದೆ. ಇದರಿಂದಾಗಿ 15 ರಿಂದ 18 ತಿಂಗಳಲ್ಲಿ ಎಂಜಿನಿಯರ್‌ಗಳ ಅಗತ್ಯ ಹೆಚ್ಚಾಗಿದೆ’ ಎಂದು ಕ್ವೆಸ್ ಕಾರ್ಪನ ಜಾಗತಿಕ ಸೇವೆಯ ಸಿಇಒ ಗುರುಪ್ರಸಾದ್ ಶ್ರೀನಿವಾಸನ್ ಹೇಳಿದ್ದಾರೆ.
ಹೊಸ ಉದ್ಯೋಗ ಅವಕಾಶಗಳಲ್ಲಿನ ಶೇ 60ರಷ್ಟು ಬೇಡಿಕೆಯು ಆಟೊಮೇಷನ್‌ನಂತಹ ಹೊಸ ತಂತ್ರಜ್ಞಾನದಿಂದ ಬರುತ್ತಿದೆ. ಈ ಕ್ಷೇತ್ರದಲ್ಲಿನ ಪರಿಣತರ ಬೇಡಿಕೆಯು, ತಂತ್ರಜ್ಞರ ಲಭ್ಯತೆಗಿಂತ (ಪೂರೈಕೆ) ಹೆಚ್ಚಿಗೆ ಇದೆ. ಇದು ವೇತನ ಹೆಚ್ಚಳಕ್ಕೂ ಕಾರಣವಾಗುತ್ತಿದೆ.
‘ಹೊಸ ವೃತ್ತಿ ಕೌಶಲಗಳನ್ನು ಕರಗತ ಮಾಡಿಕೊಂಡ ತಂತ್ರಜ್ಞರು, ಸಾಂಪ್ರದಾಯಿಕ ಐ.ಟಿ ಕೌಶಲದ ಐದಾರು ವರ್ಷದ ಅನುಭವಿ ಎಂಜಿನಿಯರುಗಳಿಗಿಂತ ಹೆಚ್ಚಿನ ಸಂಬಳ ಪಡೆಯುತ್ತಿದ್ದಾರೆ. ಈ ಎರಡೂ ಗುಂಪಿನಲ್ಲಿ ಕೆಲಸ ಮಾಡುವ ತಂತ್ರಜ್ಞರ ವೇತನ ಅಂತರವು ಶೇ 15 ರಿಂದ ಶೇ 20ರಷ್ಟಿದೆ’ ಎಂದು ಶ್ರೀನಿವಾಸನ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.