ADVERTISEMENT

ವಿಮಾನದಲ್ಲಿ ಸೀಟು ಆಯ್ಕೆ: ಹೆಚ್ಚುವರಿ ಹಣಕ್ಕೆ ನಕಾರ

ಪಿಟಿಐ
Published 2 ಡಿಸೆಂಬರ್ 2018, 17:26 IST
Last Updated 2 ಡಿಸೆಂಬರ್ 2018, 17:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ವಿಮಾನ ಪ್ರಯಾಣ ವೇಳೆ ತಮ್ಮ ಆಯ್ಕೆಯ ಸೀಟು ಕಾದಿರಿಸಲು ಹೆಚ್ಚುವರಿ ಹಣ ‍ಪಾವತಿಗೆ ಬಹುತೇಕ ಜನರು ಹಿಂದೇಟು ಹಾಕಿದ್ದಾರೆ.

ಅಂತರ್ಜಾಲ ಚೆಕ್‌ ಇನ್‌ ಅಥವಾ ನಿಲ್ದಾಣದಲ್ಲಿನ ಚೆಕ್‌ ಇನ್‌ ಕೌಂಟರ್‌ನಲ್ಲಿ ವಿಮಾನ ಯಾನ ಸಂಸ್ಥೆಯು ಒದಗಿಸುವ ಯಾವುದೇ ಸೀಟಿನಲ್ಲಿ ಕುಳಿತುಕೊಂಡು ಪ್ರಯಾಣಿಸಲು ತಮ್ಮ ಅಭ್ಯಂತರ ಇಲ್ಲ ಎಂದು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಸಮೀಕ್ಷೆಯೊಂದರಲ್ಲಿ ತಿಳಿಸಿದ್ದಾರೆ.

ಯಾವುದಾದರೂ ಸೀಟು ದೊರೆತರೆ ಅದಕ್ಕೆ ತಮ್ಮ ಸಮ್ಮತಿ ಇರುತ್ತದೆ ಎಂದು ಶೇ 41ರಷ್ಟು ಜನರು ಹೇಳಿದ್ದಾರೆ. ವಿಮಾನ ನಿಲ್ದಾಣಕ್ಕೆ ಮುಂಚಿತವಾಗಿಯೇ ತಲುಪುವ ತಾವು ತಮ್ಮ ಇಷ್ಟದ ಸೀಟು ಆಯ್ಕೆ ಮಾಡಿಕೊಳ್ಳುವುದಾಗಿ ಶೇ 24ರಷ್ಟು ಜನರು ತಿಳಿಸಿದ್ದಾರೆ.

ADVERTISEMENT

ತಮಗೆ ಇಷ್ಟದ ಸೀಟು ಕಾದಿರಿಸಲು ಹೆಚ್ಚುವರಿ ಹಣ ಪಾವತಿಸಲು ಶೇ 12ರಷ್ಟು ಜನರು ಮಾತ್ರ ಮುಂದೆ ಬಂದಿದ್ದಾರೆ ಎಂದು ಸಮೀಕ್ಷೆ ನಡೆಸಿದ ಸಾಮಾಜಿಕ ಜಾಲತಾಣ ಲೋಕಲ್‌ ಸರ್ಕರ್ಲ್ಸ್‌ ತಿಳಿಸಿದೆ. 23 ಸಾವಿರ ಪ್ರಯಾಣಿಕರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು.

ಒಟ್ಟಾರೆ ಸೀಟುಗಳಲ್ಲಿ ಕಾಲುಭಾಗದಷ್ಟು ಸೀಟುಗಳ ಆಯ್ಕೆಗೆ ಹೆಚ್ಚುವರಿ ಹಣ ವಿಧಿಸಬಹುದು ಎಂದು ಶೇ 43ರಷ್ಟು ಜನರು ಹೇಳಿದ್ದಾರೆ. ಹೆಚ್ಚುವರಿ ಶುಲ್ಕ ವಿಧಿಸುವ ಸೀಟುಗಳ ಸಂಖ್ಯೆಯನ್ನು ವಿಮಾನ ಯಾನ ಸಂಸ್ಥೆಯೇ ನಿರ್ಧರಿಸಲಿ ಎಂದು ಶೇ 8ರಷ್ಟು ‍ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.

ಇಂಡಿಗೊ ವಿವಾದ: ಅಂತರ್ಜಾಲ ತಾಣದ ಮೂಲಕ ಚೆಕ್‌ – ಇನ್‌ ಮಾಡುವ ಪ್ರಯಾಣಿಕರು ಇದಕ್ಕಾಗಿ ಹೆಚ್ಚುವರಿ ಹಣ ಪಾವತಿಸಬೇಕು ಎಂದು ಅಗ್ಗದ ವಿಮಾನಯಾನ ಸಂಸ್ಥೆ ಇಂಡಿಗೊ ಪ್ರಕಟಿಸಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಈ ನಿರ್ಧಾರವನ್ನು ಪರಿಶೀಲಿಸುವುದಾಗಿ ಕೇಂದ್ರ ಸರ್ಕಾರವೂ ತಿಳಿಸಿತ್ತು.

ಪ್ರಯಾಣಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ, ಹೆಚ್ಚುವರಿ ವೆಚ್ಚ ಇಲ್ಲದೇ ಪ್ರಯಾಣಿಕರೇ ಆಯ್ಕೆ ಮಾಡಿಕೊಳ್ಳಬಹುದಾದ ಸೀಮಿತ ಸಂಖ್ಯೆಯ ಕೆಲ ಸೀಟುಗಳೂ ಲಭ್ಯ ಇರುತ್ತವೆ ಎಂದು ಸಂಸ್ಥೆಯು ಆನಂತರ ಸ್ಪಷ್ಟನೆ ನೀಡಿತ್ತು.

ಗಣ್ಯ ವ್ಯಕ್ತಿಗಳು ದೇಶಿ ವಿಮಾನಯಾನದಲ್ಲಿ ತಮಗೆ ಇಷ್ಟದ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇವರು ತಮ್ಮ ಪ್ರಭಾವ ಬಳಸಿ ಹೆಚ್ಚುವರಿ ಹಣ ಪಾವತಿಸದೇ ಇಂತಹ ಸೀಟುಗಳನ್ನು ಪಡೆದುಕೊಳ್ಳುತ್ತಾರೆ ಎಂದು ಶೇ 78ರಷ್ಟು ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.