ADVERTISEMENT

ನಿಯಮಾವಳಿ ಉಲ್ಲಂಘನೆ: ಏರ್‌ ಇಂಡಿಯಾಗೆ ₹80 ಲಕ್ಷ ದಂಡ

ಪಿಟಿಐ
Published 23 ಮಾರ್ಚ್ 2024, 15:47 IST
Last Updated 23 ಮಾರ್ಚ್ 2024, 15:47 IST
......
......   

ನವದೆಹಲಿ: ವಿಮಾನ ಕಾರ್ಯಾಚರಣೆ ಅವಧಿ ಹಾಗೂ ಪೈಲಟ್‌ಗಳ ವಿಶ್ರಾಂತಿಗೆ ಸಂಬಂಧಿಸಿದಂತೆ ರೂಪಿಸಿರುವ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಏರ್‌ ಇಂಡಿಯಾ ಕಂಪನಿಗೆ, ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ₹80 ಲಕ್ಷ ದಂಡ ವಿಧಿಸಿದೆ.

ಕಳೆದ ಎರಡು ತಿಂಗಳ ಅವಧಿಯಲ್ಲಿ ಟಾಟಾ ಗ್ರೂಪ್‌ ಒಡೆತನದ ಏರ್‌ ಇಂಡಿಯಾಗೆ ದಂಡ ವಿಧಿಸಿದ ಮೂರನೇ ಪ್ರಕರಣ ಇದಾಗಿದೆ. ದೀರ್ಘಾವಧಿವರೆಗೆ ವಿಮಾನ ಹಾರಾಟ ನಡೆಸಿದ ಪೈಲಟ್‌ಗಳಿಗೆ ವಿಶ್ರಾಂತಿ ನೀಡುವಲ್ಲಿ ನಿಯಮಾವಳಿ ಉಲ್ಲಂಘಿಸಲಾಗಿದೆ ಎಂದು ಡಿಜಿಸಿಎ ಹೇಳಿದೆ.

ಪೈಲಟ್‌ಗಳ ಕರ್ತವ್ಯ ಮತ್ತು ವಿಶ್ರಾಂತಿ ಅವಧಿಗೆ ಸಂಬಂಧಿಸಿದಂತೆ ಜನವರಿಯಲ್ಲಿ ಡಿಜಿಸಿಎ ಅಧಿಕಾರಿಗಳು, ಖುದ್ದಾಗಿ ಪರಿಶೀಲನೆ ನಡೆಸಿದ್ದರು. ಈ ವೇಳೆ 60 ವರ್ಷ ಮೇಲ್ಪಟ್ಟ ಇಬ್ಬರು ಪೈಲಟ್‌ಗಳು ಏರ್‌ ಇಂಡಿಯಾದ ವಿಮಾನವನ್ನು ಹಾರಾಟ ನಡೆಸಿರುವ ಸಂಗತಿ ಬೆಳಕಿಗೆ ಬಂದಿತ್ತು. 16 ಗಂಟೆಗೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದ ಈ ಇಬ್ಬರಿಗೂ ವಿಶ್ರಾಂತಿ ನೀಡದಿರುವುದು ಕಂಡುಬಂದಿತ್ತು.

ADVERTISEMENT

ಈ ಕುರಿತು ಮಾರ್ಚ್ 1ರಂದು ನೋಟಿಸ್‌ ನೀಡಲಾಗಿತ್ತು. ಇದಕ್ಕೆ ಏರ್‌ ಇಂಡಿಯಾವು ನೀಡಿರುವ ಉತ್ತರವು ಸಮರ್ಪಕವಾಗಿಲ್ಲ. ಲೋಪ ಎಸಗಿರುವುದು ಕಂಡುಬಂದಿದೆ.  ಹಾಗಾಗಿ, ದಂಡ ವಿಧಿಸಲಾಗಿದೆ ಎಂದು ಡಿಜಿಸಿಎ ತಿಳಿಸಿದೆ.

ಪೈಲಟ್‌ಗಳ ಕರ್ತವ್ಯ ಹಾಗೂ ವಿಶ್ರಾಂತಿ ಸಂಬಂಧ ಡಿಜಿಸಿಎ ಪರಿಷ್ಕೃತ ನಿಯಮಾವಳಿಗಳನ್ನು ರೂಪಿಸಿದೆ. ವಿಮಾನಯಾನ ಕಂಪನಿಗಳು ಜೂನ್‌ 1ರಿಂದ ಕಡ್ಡಾಯವಾಗಿ ಇವುಗಳನ್ನು ಜಾರಿಗೊಳಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.