ADVERTISEMENT

ರಿಯಲ್‌ ಎಸ್ಟೇಟ್‌ ಹೂಡಿಕೆದಾರರಿಗೆ ಜಾಗೃತಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 16:28 IST
Last Updated 5 ಜೂನ್ 2024, 16:28 IST
   

ಬೆಂಗಳೂರು: ದೇಶದ ಹಣಕಾಸು ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳು (ಆರ್‌ಇಐಟಿ) ಮತ್ತು ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳ (ಇನ್ವಿಟ್ಸ್‌) ಬಗ್ಗೆ ಹೂಡಿಕೆದಾರರಲ್ಲಿ ಜಾಗೃತಿ ಮೂಡಿಸಲು ದೇಶದ ರಿಯಲ್‌ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳ (ಆರ್‌ಇಐಟಿ) ಸಂಘ ​​(ಐಆರ್‌ಎ) ಮತ್ತು ಭಾರತ್ ಇನ್‌ಫ್ರಾಸ್ಟ್ರಕ್ಚರ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳ (ಬಿಐಎ) ಸಂಘ ಮುಂದಾಗಿವೆ.

ಎರಡೂ ಸಂಘಟನೆಗಳು ಮೊದಲ ಬಾರಿಗೆ ಪಾಲುದಾರಿಕೆ ಹೊಂದಿದ್ದು, ಹೂಡಿಕೆದಾರರಿಗೆ ಈ ಕುರಿತು ಶಿಕ್ಷಣ ನೀಡಲು ನಿರ್ಧರಿಸಿವೆ. ‘ಆರ್‌ಇಐಟಿʼ ಮತ್ತು ‘ಇನ್ವಿಟ್‌’ಗಳಲ್ಲಿ ಹೂಡಿಕೆಗೆ ಉತ್ತೇಜನ ನೀಡುವುದು, ಅವುಗಳ ಕಾರ್ಯ ನಿರ್ವಹಣೆ ಮತ್ತು ನಿಯಂತ್ರಣ  ವ್ಯವಸ್ಥೆಯನ್ನು ಬಲಪಡಿಸುವುದು, ಬಂಡವಾಳ ಮಾರುಕಟ್ಟೆ ಬಲಪಡಿಸುವುದು ಮತ್ತು ಹೂಡಿಕೆದಾರರಲ್ಲಿ ಜಾಗೃತಿ ಹೆಚ್ಚಿಸುವುದೇ ಈ ಸಹಯೋಗದ ಮೂಲ ಗುರಿಯಾಗಿದೆ ಎಂದು ಇಂಡಿಗ್ರಿಡ್‌ನ ಸಿಐಒ ಮೇಘನಾ ಪಂಡಿತ್‌ ಅವರು, ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶದ ‘ಆರ್‌ಇಐಟಿ’ ಮಾರುಕಟ್ಟೆಯು ₹1,40 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತದ ಎಯುಎಂ ಹೊಂದಿದೆ. ಇದರ ಒಟ್ಟಾರೆ ಮಾರುಕಟ್ಟೆ ಮೌಲ್ಯವು ₹85,000 ಕೋಟಿಗಿಂತಲೂ ಹೆಚ್ಚಿದೆ ಎಂದು ತಿಳಿಸಿದರು.

ADVERTISEMENT

ಕೇವಲ ಐದು ವರ್ಷಗಳಲ್ಲಿ ಆರ್‌ಇಐಟಿಗಳು ₹17,000 ಕೋಟಿಗೂ ಹೆಚ್ಚಿನ ಮೊತ್ತವನ್ನು ತಮ್ಮ ಯುನಿಟ್‌ ಹೊಂದಿರುವವರಿಗೆ ವಿತರಿಸಿವೆ. ಈ ಮೊತ್ತವು ನಿಫ್ಟಿ ರಿಯಾಲ್ಟಿ ಸೂಚ್ಯಂಕದ ಒಟ್ಟಾರೆ ವಿತರಣಾ ಮೊತ್ತವನ್ನು ಮೀರಿದೆ ಎಂದು ಹೇಳಿದರು.

ದೇಶದ ಮಾರುಕಟ್ಟೆಯಲ್ಲಿ ಪರಿಚಯಿಸಿದಾಗಿನಿಂದಲೂ ಇನ್‌ಫ್ರಾಸ್ಟ್ರಕ್ಚರ್‌  ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳು (ಇನ್‌ವಿಟ್ಸ್‌) ಉತ್ತಮ ಬೆಳವಣಿಗೆ ಸಾಧಿಸಿವೆ. ರಸ್ತೆಗಳು, ವಿದ್ಯುತ್‌ ವಿತರಣಾ ಮಾರ್ಗಗಳು, ಮೊಬೈಲ್‌ ಗೋಪುರಗಳು, ಫೈಬರ್ ಕೇಬಲ್‌ಗಳು, ಉಗ್ರಾಣಗಳು, ನವೀಕರಿಸಬಹುದಾದ ಇಂಧನ ಸೇರಿ ವಿವಿಧ ಕ್ಷೇತ್ರದಲ್ಲಿ ಮೂಲ ಸೌಕರ್ಯದ ಸ್ವತ್ತುಗಳನ್ನು ಈ ಟ್ರಸ್ಟ್‌ಗಳು ಹೊಂದಿವೆ. ಜೊತೆಗೆ ಅವುಗಳನ್ನು ನಿರ್ವಹಣೆ ಮಾಡುತ್ತಿವೆ. ಹೂಡಿಕೆದಾರರಿಗೆ ವಿವಿಧ ಪ್ರಮಾಣದ ಹೂಡಿಕೆಯ ಸಾಧ್ಯತೆಗೆ ಅವಕಾಶ ಕಲ್ಪಿಸಿವೆ’ ಎಂದು ಬ್ರೂಕ್‌ಫೀಲ್ಡ್ ಆಸ್ತಿ ನಿರ್ವಹಣೆ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಶೈಲೇಂದ್ರ ಸಭನಾನಿ ತಿಳಿಸಿದರು.

ಸದ್ಯ ದೇಶದ ಷೇರುಪೇಟೆಯಲ್ಲಿ ಇಂತಹ ವಹಿವಾಟು ನಡೆಸುವ 4 ಸರ್ಕಾರಿ ಮತ್ತು 14 ಖಾಸಗಿ ಕಂಪನಿಗಳಿವೆ. ಇವುಗಳು ಒಟ್ಟಾರೆ  ₹5 ಲಕ್ಷ ಕೋಟಿ ಮೌಲ್ಯದ ಆಸ್ತಿ ನಿರ್ವಹಿಸುತ್ತವೆ. 2019ರಿಂದ ಷೇರುಗಳ ರೂಪದಲ್ಲಿ ₹1.1 ಲಕ್ಷ ಕೋಟಿ ಮೊತ್ತ ಸಂಗ್ರಹಿಸಿವೆ. ಷೇರುಪೇಟೆಯಲ್ಲಿ ವಹಿವಾಟು ನಡೆಸುವ ನಾಲ್ಕು ಇನ್‌ವಿಟ್ಸ್‌ಗಳು ₹27,500 ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿವೆ. ಮಾರ್ಚ್ 31ಕ್ಕೆ 1.7 ಲಕ್ಷ ಯುನಿಟ್‌ದಾರರನ್ನು ಹೊಂದಿವೆ ಎಂದು ತಿಳಿಸಿದರು.

ದೇಶದ ರಿಯಲ್‌ ಎಸ್ಟೇಟ್‌ ವಲಯದ ಒಟ್ಟಾರೆ ಮಾರುಕಟ್ಟೆ ಮೌಲ್ಯದ ಶೇ 14ರಷ್ಟನ್ನು ಆರ್‌ಇಐಟಿಗಳು ಪ್ರತಿನಿಧಿಸುತ್ತವೆ. ಸದ್ಯಕ್ಕೆ 2.30 ಲಕ್ಷ ಯುನಿಟ್‌ದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಬೆಳವಣಿಗೆಗೆ ವಿಪುಲ ಅವಕಾಶಗಳಿವೆ. ಈ ಬಗ್ಗೆ ಪ್ರಮುಖ ನಗರಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. 

ಆರ್‌ಇಐಟಿಗಳನ್ನು ಷೇರುಗಳೆಂದು ವರ್ಗೀಕರಿಸುವುದರಿಂದ ಅವುಗಳನ್ನು ಇಟಿಎಫ್‌ ಅಥವಾ ಈಕ್ವಿಟಿ ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ಸೇರ್ಪಡೆಗೊಳಿಸಲು ನೆರವಾಗಲಿದೆ. ಇದು ಹೆಚ್ಚಿನ ದ್ರವ್ಯತೆ ಮತ್ತು ಈ ಹೂಡಿಕೆ ಉತ್ಪನ್ನವನ್ನು  ಹೂಡಿಕೆದಾರರು ವ್ಯಾಪಕವಾಗಿ ಒಪ್ಪಿಕೊಳ್ಳುವುದಕ್ಕೆ ಉತ್ತೇಜನ ನೀಡಲಿದೆ ಎಂದು ವಿವರಿಸಿದರು. 

ನೆಕ್ಸಸ್‌ ಸೆಲೆಕ್ಟ್‌ ಟ್ರಸ್ಟ್‌ನ ಸಿಎಫ್‌ಒ ರಾಜೇಶ್‌ ಡಿಯೊ, ಮೈಂಡ್‌ಸ್ಪೇಸ್‌ ಆರ್‌ಇಐಟಿ ಸಿಎಫ್‌ಒ ಪ್ರೀತಿ ಚೆಡ್ಡಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.