ನವದೆಹಲಿ: ಸಿಟಿ ಗ್ರೂಪ್‌ನ ಭಾರತದ ರಿಟೇಲ್ ವಹಿವಾಟುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಖಾಸಗಿ ವಲಯದ ಎಕ್ಸಿಸ್ ಬ್ಯಾಂಕ್ ಸಜ್ಜಾಗಿದೆ. ಈ ಕುರಿತ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಸ್ವಾಧೀನದ ಮೌಲ್ಯವು ₹ 18 ಸಾವಿರ ಕೋಟಿ ಆಗಿರಲಿದೆ. ಈ ಸ್ವಾಧೀನಕ್ಕೆ ಕಾನೂನು ಜಾರಿ ಸಂಸ್ಥೆಗಳ ಅನುಮೋದನೆ ಅಗತ್ಯವಿದೆ. ಭಾರತದಲ್ಲಿನ ಗ್ರಾಹಕ ಬ್ಯಾಂಕಿಂಗ್ ಸೇವೆಗಳಿಂದ ಹೊರನಡೆಯುವ ತೀರ್ಮಾನವನ್ನು ಸಿಟಿ ಗ್ರೂಪ್ 2021ರ ಏಪ್ರಿಲ್‌ನಲ್ಲಿ ಪ್ರಕಟಿಸಿತ್ತು.
ಕ್ರೆಡಿಟ್ ಕಾರ್ಡ್ ಸೇವೆ, ರಿಟೇಲ್ ಬ್ಯಾಂಕಿಂಗ್, ಗೃಹ ಸಾಲ, ಸಂಪತ್ತು ನಿರ್ವಹಣೆ ಸೇವೆಗಳು ಈ ವಹಿವಾಟಿನಲ್ಲಿ ಸೇರಿವೆ. ಸಿಟಿ ಬ್ಯಾಂಕ್ ಭಾರತದಲ್ಲಿ 35 ಶಾಖೆಗಳನ್ನು ಹೊಂದಿದ್ದು, ಗ್ರಾಹಕ ಬ್ಯಾಂಕಿಂಗ್ ಸೇವಾ ವಿಭಾಗದಲ್ಲಿ ನಾಲ್ಕು ಸಾವಿರ ನೌಕರರು ಕೆಲಸ ಮಾಡುತ್ತಿದ್ದಾರೆ.
ಸಿಟಿ ಬ್ಯಾಂಕ್‌ನ ಗ್ರಾಹಕ ಬ್ಯಾಂಕಿಂಗ್ ಸೇವೆಗಳ ಸ್ವಾಧೀನಕ್ಕೆ ಎಕ್ಸಿಸ್ ಬ್ಯಾಂಕ್‌ಗೆ ಅನುಮೋದನೆ ದೊರೆತ ನಂತರದಲ್ಲಿ, ಎಕ್ಸಿಸ್ ಬ್ಯಾಂಕ್‌ನ ರಿಟೇಲ್ ವಹಿವಾಟಿನಲ್ಲಿ ದೊಡ್ಡ ಪ್ರಮಾಣದ ಏರಿಕೆ ಕಂಡುಬರಲಿದೆ. ಗ್ರಾಹಕ ಬ್ಯಾಂಕಿಂಗ್ ಸೇವೆಗಳನ್ನು ಸಿಟಿ ಬ್ಯಾಂಕ್ ಭಾರತದಲ್ಲಿ 1985ರಲ್ಲಿ ಆರಂಭಿಸಿತ್ತು.
ಸಿಟಿ ಬ್ಯಾಂಕ್ ದೇಶದಲ್ಲಿ ಒಟ್ಟು 26 ಲಕ್ಷ ಜನರಿಗೆ ಕ್ರೆಡಿಟ್ ಕಾರ್ಡ್ ಸೇವೆ ನೀಡುತ್ತಿದೆ. ಸಿಟಿ ಬ್ಯಾಂಕ್‌ನ ಸಾಂಸ್ಥಿಕ ಗ್ರಾಹಕ ವ್ಯವಹಾರಗಳನ್ನು ಎಕ್ಸಿಸ್ ಬ್ಯಾಂಕ್‌ಗೆ ಮಾರಾಟ ಮಾಡುತ್ತಿಲ್ಲ. 2023ರ ಮೊದಲಾರ್ಧದಲ್ಲಿ ಸ್ವಾಧೀನವು ಪೂರ್ಣಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.