ADVERTISEMENT

ಬಜಾಜ್ ಆಟೊ, ಔಡಿ ಕಂಪನಿಗಳಿಂದ ಸೇವಾ ಅವಧಿ ವಿಸ್ತರಣೆ

ಪಿಟಿಐ
Published 19 ಮೇ 2021, 16:31 IST
Last Updated 19 ಮೇ 2021, 16:31 IST

ಮುಂಬೈ: ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಜಾಜ್‌ ಆಟೊ, ಔಡಿ ಇಂಡಿಯಾ ಕಂಪನಿಗಳು ಸೇವಾ ಅವಧಿ ವಿಸ್ತರಿಸಿವೆ.

ಬಜಾಜ್ ಆಟೊ ಕಂಪನಿಯು ತನ್ನೆಲ್ಲ ಬ್ರ್ಯಾಂಡ್‌ಗಳ ಮೇಲಿನ ಉಚಿತ ಸೇವಾ ಅವಧಿಯನ್ನು ಜುಲೈ 31ರವರೆಗೆ ವಿಸ್ತರಣೆ ಮಾಡಿರುವುದಾಗಿ ಬುಧವಾರ ತಿಳಿಸಿದೆ.

ಏಪ್ರಿಲ್‌ 1ರಿಂದ ಮೇ 31ರೊಳಗೆ ಉಚಿತ ಸೇವೆಗಳ ಅವಧಿ ಮುಗಿಯುವುದಿದ್ದರೆ ಅಂತಹ ವಾಹನಗಳಿಗೆ ಉಚಿತ ಸೇವಾ ಅವಧಿಯು ಜುಲೈ 31ರವರೆಗೂ ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲ ದ್ವಿಚಕ್ರ ಮತ್ತು ವಾಣಿಜ್ಯ ವಾಹನಗಳಿಗೂ ಇದು ಅನ್ವಯಿಸಲಿದೆ ಎಂದು ಹೇಳಿದೆ.

ADVERTISEMENT

ಐಷಾರಾಮಿ ಕಾರು ತಯಾರಿಸುವ ಔಡಿ ಇಂಡಿಯಾ ಕಂಪನಿಯು ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಮುಗಿಯಲಿರುವ ವಿಸ್ತರಿತ ವಾರಂಟಿ ಮತ್ತು ಸೇವಾ ಯೋಜನೆಗಳ ಅವಧಿಯನ್ನು ಜೂನ್‌ 30ರವರೆಗೂ ವಿಸ್ತರಣೆ ಮಾಡಿದೆ.

ಟಾಟಾ ಮೋಟರ್ಸ್‌ ಕಂಪನಿಯು ವಿಸ್ತರಿತ ವಾರಂಟಿ ಮತ್ತು ಉಚಿತ ಸೇವೆಯ ಅವಧಿಯನ್ನು ವಾಣಿಜ್ಯ ವಾಹನಗಳಿಗೂ ಒಂದು ತಿಂಗಳವರೆಗೆ ವಿಸ್ತರಣೆ ಮಾಡಿದೆ. ಏಪ್ರಿಲ್ 1ರಿಂದ ಜೂನ್‌ 30ರ ಅವಧಿಯೊಳಗೆ ಮುಗಿಯಲಿರುವ ವಾಹನಗಳಿಗೆ ಇದು ಅನ್ವಯಿಸಲಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.