ADVERTISEMENT

ಸೆ. 9ರಿಂದ ಬಜಾಜ್‌ ಹೌಸಿಂಗ್‌ ಫೈನಾನ್ಸ್‌ನಿಂದ ಐಪಿಒ

ಪಿಟಿಐ
Published 3 ಸೆಪ್ಟೆಂಬರ್ 2024, 15:30 IST
Last Updated 3 ಸೆಪ್ಟೆಂಬರ್ 2024, 15:30 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ನವದೆಹಲಿ: ಬಜಾಜ್‌ ಹೌಸಿಂಗ್‌ ಫೈನಾನ್ಸ್‌ ತನ್ನ ಷೇರುಗಳನ್ನು ಸಾರ್ವಜನಿಕರ ಖರೀದಿಗೆ ಮುಕ್ತವಾಗಿಸುವ (ಐಪಿಒ) ಮೂಲಕ ₹6,560 ಕೋಟಿ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ.

ಸೆಪ್ಟೆಂಬರ್‌ 9ರಿಂದ ಐಪಿಒ ಪ್ರಕ್ರಿಯೆ ಆರಂಭವಾಗಲಿದ್ದು, 11ರಂದು ಮುಕ್ತಾಯಗೊಳ್ಳಲಿದೆ. ಆರಂಭಿಕ ಹೂಡಿಕೆದಾರರು (ಆ್ಯಂಕರ್‌ ಇನ್‌ವೆಸ್ಟರ್) ಸೆಪ್ಟೆಂಬರ್‌ 6ರಂದು ಬಿಡ್‌ ಸಲ್ಲಿಸಬಹುದಾಗಿದೆ. ಪ್ರತಿ ಷೇರಿನ ಬೆಲೆ ₹66ರಿಂದ ₹70 ಇರಲಿದೆ ಎಂದು ಕಂಪನಿ ಮಂಗಳವಾರ ತಿಳಿಸಿದೆ.

ADVERTISEMENT

ಹೊಸ ಈಕ್ವಿಟಿ ಷೇರುಗಳ ಮೂಲಕ ₹3,560 ಕೋಟಿ ಮತ್ತು ಆಫರ್‌ ಫಾರ್ ಸೇಲ್ ಮೂಲಕ (ಒಎಫ್‌ಎಸ್‌) ₹3 ಸಾವಿರ ಕೋಟಿ ಸಂಗ್ರಹಿಸಲು ಮುಂದಾಗಿದೆ. ಈ ಬಂಡವಾಳವನ್ನು ಕಂಪನಿಯ ಭವಿಷ್ಯದ ಬಂಡವಾಳದ ಅವಶ್ಯಕತೆಗಳನ್ನು ಪೂರೈಸಲು ಮತ್ತು ಬಂಡವಾಳದ ಮೂಲವನ್ನು ಹೆಚ್ಚಿಸಲು ಬಳಸಲಾಗುತ್ತದೆ ಎಂದು ತಿಳಿಸಿದೆ. ಹೂಡಿಕೆದಾರರು ಕನಿಷ್ಠ 214 ಈಕ್ವಿಟಿ ಷೇರುಗಳಿಗೆ ಬಿಡ್‌ ಸಲ್ಲಿಸಬಹುದಾಗಿದೆ.

2023–24ರ ಹಣಕಾಸು ವರ್ಷದಲ್ಲಿ ಬಜಾಜ್‌ ಹೌಸಿಂಗ್‌ ಫೈನಾನ್ಸ್‌ ₹1,731 ಕೋಟಿ ನಿವ್ವಳ ಲಾಭ ಗಳಿಸಿತ್ತು. 2022–23ರ ಇದೇ ಅವಧಿಯಲ್ಲಿ ₹1,258 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 38ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.