ADVERTISEMENT

ಕೆವೈಸಿ: ಬ್ಯಾಂಕ್‌ ಶಾಖೆಗೆ ಭೇಟಿ ಅನಗತ್ಯ- ಆರ್‌ಬಿಐ

ದೃಢೀಕರಣಕ್ಕೆ ಡಿಜಿಟಲ್‌ ವ್ಯವಸ್ಥೆ: ಮಾರ್ಗಸೂಚಿ ನೀಡಿದ ರಿಸರ್ವ್‌ ಬ್ಯಾಂಕ್‌

ಪಿಟಿಐ
Published 6 ಜನವರಿ 2023, 21:11 IST
Last Updated 6 ಜನವರಿ 2023, 21:11 IST
ಸಾಂಕೇತಿ ಕಚಿತ್ರ
ಸಾಂಕೇತಿ ಕಚಿತ್ರ   

ನವದೆಹಲಿ: ಬ್ಯಾಂಕ್‌ ಖಾತೆ ಹೊಂದಿರುವ ಗ್ರಾಹಕರು ತಮ್ಮ ವೈಯಕ್ತಿಕ ಮಾಹಿತಿಯಲ್ಲಿ (ಕೆವೈಸಿ) ಬದಲಾವಣೆ ಅಥವಾ ಅಪ್‌ಡೇಟ್‌ ಮಾಡಲು ಶಾಖೆಗೆ ಖುದ್ದು ಹಾಜರಾಗುವಂತೆ ಒತ್ತಾಯಿಸಬಾರದು ಎಂದು ಆರ್‌ಬಿಐ ತಾಕೀತು ಮಾಡಿದೆ.

ಕೆವೈಸಿ ಅಪ್‌ಡೇಟ್‌ ಮಾಡುವ ಸಂಬಂಧ ಮಾರ್ಗಸೂಚಿಗಳನ್ನು ಆರ್‌ಬಿಐ ಬಿಡುಗಡೆ ಮಾಡಿದೆ. ಗ್ರಾಹಕರು ತಮ್ಮ ಕೆವೈಸಿಗೆ ಸಂಬಂಧಿಸಿದಂತೆ ಸರಿಯಾದ ದಾಖಲೆಪತ್ರಗಳನ್ನು ಈಗಾಗಲೇ ನೀಡಿದ್ದರೆ ಮತ್ತು ತಮ್ಮ ವಿಳಾಸ ಬದಲಾಯಿಸದೇ ಇದ್ದರೆ ಕೆವೈಸಿ ಅಪ್‌ಡೇಟ್‌ ಮಾಡಲು ಶಾಖೆಗೆ ಖುದ್ದು ಹಾಜರಾಗುವ ಅಗತ್ಯ ಇಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಕೆವೈಸಿ ಮಾಹಿತಿಗಳಲ್ಲಿ ಬದಲಾವಣೆ ಇಲ್ಲದೇ ಇದ್ದರೆ ಗ್ರಾಹಕರು ಇ–ಮೇಲ್‌ ಐ.ಡಿ. ಮೂಲಕ, ಬ್ಯಾಂಕ್‌ಗೆ ನೀಡಿರುವ ಮೊಬೈಲ್‌ ಸಂಖ್ಯೆಯ ಮೂಲಕ, ಎಟಿಎಂ ಮೂಲಕ ಅಥವಾ ಡಿಜಿಟಲ್‌ ವ್ಯವಸ್ಥೆಗಳ (ಆನ್‌ಲೈನ್‌ ಬ್ಯಾಂಕಿಂಗ್‌/ಇಂಟರ್‌ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಆ್ಯಪ್‌) ಮೂಲಕ ಸ್ವಯಂ–ದೃಢೀಕರಣವನ್ನು ಸಂಬಂಧಪಟ್ಟ ಬ್ಯಾಂಕ್‌ಗೆ ಸಲ್ಲಿಸಬೇಕು.

ADVERTISEMENT

ಗ್ರಾಹಕರು ಶಾಖೆಗೆ ಹಾಜರಾಗದೇ ಸ್ವಯಂ ದೃಢೀಕರಣ ಸಲ್ಲಿಸಲು ಬೇಕಾದ ವ್ಯವಸ್ಥೆಯನ್ನು ಬ್ಯಾಂಕ್‌ಗಳು ಕಲ್ಪಿಸಿಕೊಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ವಿಳಾಸದ ಬದಲಾವಣೆಯನ್ನು ಮಾತ್ರವೇ ಮಾಡಬೇಕಿದ್ದರೆ, ಶಾಖೆಗೆ ಹಾಜರಾಗದೇ ಡಿಜಿಟಲ್‌ ವ್ಯವಸ್ಥೆ, ಇ–ಮೇಲ್‌, ಅಥವಾ ಎಟಿಎಂ ಮೂಲಕವೇ ದಾಖಲೆ ಸಲ್ಲಿಸಬಹುದು. ವಿಳಾಸ ಬದಲಾಗಿರುವ ಬಗ್ಗೆ ಎರಡು ತಿಂಗಳ ಒಳಗಾಗಿ ಬ್ಯಾಂಕ್‌ ದೃಢೀಕರಿಸಲಿದೆ.

ಹೊಸದಾಗಿ ಕೆವೈಸಿ ಪ್ರಕ್ರಿಯೆಯನ್ನು ಶಾಖೆಗೆ ಖುದ್ದು ಹಾಜರಾಗಿ ಅಥವಾ ವಿಡಿಯೊ ಆಧಾರಿತ ಗುರುತು ದೃಢೀಕರಣ ಪ್ರಕ್ರಿಯೆ ಮೂಲಕ ಪೂರ್ಣಗೊಳಿಸಬಹುದು ಎಂದು ಮಾರ್ಗಸೂಚಿಯಲ್ಲಿ
ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.