ADVERTISEMENT

ಎಟಿಎಂನಲ್ಲಿ ₹2,000 ನೋಟುಗಳ ಸಂಖ್ಯೆ ಕಡಿತ; ಪಿಂಕ್‌ ನೋಟು ಮರೆಗೆ?

ಏಜೆನ್ಸೀಸ್
Published 26 ಫೆಬ್ರುವರಿ 2020, 18:04 IST
Last Updated 26 ಫೆಬ್ರುವರಿ 2020, 18:04 IST
   
""

ನವದೆಹಲಿ: ಗರಿಷ್ಠ ಮುಖಬೆಲೆಯ ನೋಟುಗಳ ಪ್ರಮಾಣ ಕಡಿಮೆಯಾಗುತ್ತಿದೆಯೇ? ಎಟಿಎಂಗಳು ₹2000 ಮುಖಬೆಲೆಯ ನೋಟುಗಳಿಗಿಂತ ಹೆಚ್ಚು ₹500ರ ನೋಟುಗಳನ್ನೇ ನೀಡುತ್ತಿರುವುದು ಇಂಥದ್ದೊಂದು ಪ್ರಶ್ನೆಯನ್ನು ಮುಂದಿಟ್ಟಿದೆ.

₹2000 ಮುಖಬೆಲೆ ನೋಟು ಮುದ್ರಿಸುವುದನ್ನು ನಿಲ್ಲಿಸಿರುವುದಾಗಿ ಕಳೆದ ವರ್ಷ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಆರ್‌ಟಿಐ ಪ್ರತಿಕ್ರಿಯೆಯಲ್ಲಿ ತಿಳಿಸಿತ್ತು.

ಹಣಕಾಸು ಸಚಿವಾಲಯದಿಂದ ಯಾವುದೇ ಸೂಚನೆ ಇರದಿದ್ದರೂ ಬ್ಯಾಂಕ್‌ಗಳು ಗ್ರಾಹಕರ ಅನುಕೂಲದ ದೃಷ್ಟಿಯಿಂದ ಎಟಿಎಂಗಳಿಗೆಕಡಿಮೆ ಮುಖಬೆಲೆಯ ನೋಟುಗಳನ್ನು ಭರ್ತಿ ಮಾಡುತ್ತಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.

ADVERTISEMENT

ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಬ್ಯಾಂಕ್‌, ₹2,000 ಮುಖಬೆಲೆಯ ನೋಟುಗಳನ್ನು ಎಟಿಎಂಗಳಿಗೆ ತುಂಬುವುದನ್ನು ನಿಲ್ಲಿಸಲು ನಿರ್ಧರಿಸಿರುವುದಾಗಿ ಈಗಾಗಲೇ ಪ್ರಕಟಿಸಿದೆ.

₹2,000 ನೋಟುಗಳಿಗೆ ಚಿಲ್ಲರೆ ಪಡೆಯುವುದು ಸಮಸ್ಯೆಯಾಗಿ ಪರಿಣಮಿಸಿರುವುದರಿಂದ ಕೆಲವು ಬ್ಯಾಂಕ್‌ಗಳು ಎಟಿಎಂಗಳಲ್ಲಿ ಗರಿಷ್ಠ ಮುಖಬೆಲೆ ನೋಟುಗಳನ್ನು ಬಳಸುವುದನ್ನು ನಿಲ್ಲಿಸಿವೆ. ಆರ್‌ಬಿಐನ ಆರ್‌ಟಿಐ ಪ್ರತಿಕ್ರಿಯೆ ಪ್ರಕಾರ, 2016–17ರಲ್ಲಿ ₹2,000 ಮುಖಬೆಲೆಯ 354.299 ಕೋಟಿ ನೋಟುಗಳನ್ನು ಮುದ್ರಿಸಲಾಗಿದೆ.

ಕಪ್ಪು ಹಣ ಮತ್ತು ನಕಲಿ ನೋಟುಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಸರ್ಕಾರ 2016ರ ನವೆಂಬರ್‌ನಲ್ಲಿ ₹1,000 ಮತ್ತು ₹500 ಮುಖಬೆಲೆಯ ನೋಟುಗಳನ್ನು ರದ್ದು ಪಡಿಸಿತು. ₹2,000 ನೋಟುಗಳನ್ನು ಹಿಂಪಡೆಯಲಾಗುತ್ತದೆಯೇ ಎಂದು ಸಂಸತ್ತಿನಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೇಳಲಾದ ಪ್ರಶ್ನೆಗೆ, ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಠಾಕೂರ್‌ 'ಅಂತಹ ಪ್ರಸ್ತಾಪ ಇಲ್ಲ' ಎಂದಿದ್ದರು.

ಆರ್‌ಟಿಐ ಮಾಹಿತಿ ಪ್ರಕಾರ, 2016ರ ನವೆಂಬರ್‌ 4ರವರೆಗೂ ಚಲಾವಣೆಯಲ್ಲಿದ್ದ ನೋಟುಗಳ ಮೌಲ್ಯ ₹17,74,187 ಕೋಟಿ ಹಾಗೂ 2019ರ ಡಿಸೆಂಬರ್‌ 2ರಲ್ಲಿ ಚಲಾವಣೆಯಲ್ಲಿರುವ ಒಟ್ಟು ನೋಟುಗಳ ಮೌಲ್ಯ ₹22,35,648 ಕೋಟಿ ಆಗಿದೆ. 2014ರ ಅಕ್ಟೋಬರ್‌ನಿಂದ 2016ರ ಅಕ್ಟೋಬರ್‌ ವರೆಗೂ ಚಲಾವಣೆಯಾದ ನೋಟುಗಳ ಪ್ರಮಾಣದಲ್ಲಿ ಶೇ 14.51ರಷ್ಟು ಏರಿಕೆಯಾಗಿದೆ.

ಮುದ್ರಣಗೊಂಡ ₹2000 ಮುಖಬೆಲೆಯ ನೋಟುಗಳ ಸಂಖ್ಯೆ

* 2016–17ರಲ್ಲಿ 354.299 ಕೋಟಿ

* 2017-18ರಲ್ಲಿ 11.150 ಕೋಟಿ

* 2018–19ರಲ್ಲಿ 4.669 ಕೋಟಿ

***

ಪರೋಕ್ಷ ರದ್ದತಿ?

‘ಅಧಿಕೃತವಾಗಿ ಯಾವುದೇ ಸೂಚನೆ ಬಂದಿಲ್ಲ. ಎಟಿಎಂಗಳಿಗೆ ₹ 2 ಸಾವಿರದ ನೋಟುಗಳನ್ನು ಭರ್ತಿ ಮಾಡುವಂತಿಲ್ಲ. ಗ್ರಾಹಕರಿಂದ ₹ 2 ಸಾವಿರದ ನೋಟುಗಳನ್ನು ಪಡೆಯಿರಿ, ಆದರೆ ಅವರಿಗೆ ಮರುಪಾವತಿ ಮಾಡಬೇಡಿ. ಸಂಗ್ರಹಿಸಿರುವ ನೋಟುಗಳನ್ನು ಕರೆನ್ಸಿ ಚೆಸ್ಟ್‌ಗಳಿಗೆ ರವಾನಿಸುವಂತೆ ದೂರವಾಣಿ ಸಂದೇಶ ಬಂದಿದೆ’ ಎಂದುಬ್ಯಾಂಕ್‌ವೊಂದರ ಹೆಸರು ಬಹಿರಂಗ ಪಡಿಸಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.