ಮಂಗಳೂರು: ಕರಾವಳಿಯ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದ್ದು, ಈ ಭಾಗದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಕಾರ್ಪೊರೇಷನ್ ಬ್ಯಾಂಕ್‌ನ ಅಧಿಕಾರಿಗಳು ಶನಿವಾರ ನಗರದ ಪಾಂಡೇಶ್ವರದಲ್ಲಿರುವ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೂಡಲೇ ವಿಲೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ಕರಾವಳಿಯ ವಿಜಯ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡಾದ ಜತೆಗೆ ವಿಲೀನ ಮಾಡಿದ ಬಳಿಕ ಇದೀಗ ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ನಲ್ಲಿ ಹಾಗೂ ಕಾರ್ಪೊರೇಷನ್ ಬ್ಯಾಂಕ್ ಅನ್ನು ಯೂನಿಯನ್ ಬ್ಯಾಂಕ್‌ನಲ್ಲಿ ವಿಲೀನ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
‘ಈ ಹಿಂದಿನ ಎರಡು ವಿಲೀನದ ಪರಿಣಾಮಗಳ ಕುರಿತು ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಎಲ್ಲ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಅಧಿಕಾರಿಗಳನ್ನು ನಿರ್ದೇಶಕರನ್ನಾಗಿ ನೇಮಕ ಮಾಡಬೇಕು. ಜತೆಗೆ ಬ್ಯಾಂಕುಗಳಿಗೆ ಅಗತ್ಯ ಬಂಡವಾಳ ಒದಗಿಸಬೇಕು’ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಉಪಾಧ್ಯಕ್ಷ ಸತೀಶ್ ಶೆಟ್ಟಿ ಒತ್ತಾಯಿಸಿದ್ದಾರೆ.
1925 ರಲ್ಲಿ ‘ಕೆನರಾ ಇಂಡಸ್ಟ್ರಿಯಲ್ ಆ್ಯಂಡ್ ಬ್ಯಾಂಕಿಂಗ್ ಸಿಂಡಿಕೇಟ್’ ಹೆಸರಿನಿಂದ 1925 ರಲ್ಲಿ ಉಡುಪಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ಸ್ಥಾಪನೆಯಾಗಿತ್ತು. 1906 ರಲ್ಲಿ ‘ಹಿಂದೂ ಶಾಶ್ವತ ನಿಧಿ’ ಎಂಬ ಹೆಸರಿನಿಂದ ಆರಂಭವಾದ ಕೆನರಾ ಬ್ಯಾಂಕಿನ ಮೂಲ ಮಂಗಳೂರು. ಅದೇ ವರ್ಷ ಅಂದರೆ 1906 ರ ಮಾರ್ಚ್ 12ರಂದು ಉಡುಪಿಯಲ್ಲಿ ಕಾರ್ಪೊರೇಷನ್ ಬ್ಯಾಂಕ್ ಅನ್ನು ಸ್ಥಾಪಿಸಲಾಗಿತ್ತು.
‘ಮುಂದಿನ ವರ್ಷ ಎಂಆರ್‌ಪಿಎಲ್’
ನಗರದಲ್ಲಿರುವ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಅನ್ನು ಮುಂದಿನ ವರ್ಷ ಎಚ್‌ಪಿಸಿಎಲ್‌ನಲ್ಲಿ ವಿಲೀನಗೊಳಿಸಲು ಚಿಂತನೆ ನಡೆಸಲಾಗುತ್ತಿದೆ.
ನವದೆಹಲಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಒಎನ್‌ಜಿಸಿ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಶಶಿಶಂಕರ್, ‘ಎಂಆರ್‌ಪಿಎಲ್ ಅನ್ನು ಎಚ್‌ಪಿಸಿಎಲ್ ನಲ್ಲಿ ವಿಲೀನಗೊಳಿಸುವ ಪ್ರಸ್ತಾವ ಪ್ರಗತಿಯಲ್ಲಿದ್ದು, ಬರುವ ವರ್ಷದಿಂದ ಇದು ಜಾರಿಗೆ ಬರಲಿದೆ. ಉತ್ಪಾದನೆ ಹಾಗೂ ಮಾರಾಟ ವ್ಯವಸ್ಥೆಯನ್ನು ಒಂದೇ ವೇದಿಕೆಗೆ ತರುವ ಉದ್ದೇಶವಿದೆ’ ಎಂದು ತಿಳಿಸಿದ್ದಾರೆ.
ಪ್ರತಿಭಟನೆ
ಚೆನ್ನೈ/ಬೆಂಗಳೂರು:ಬ್ಯಾಂಕ್‌ಗಳ ವಿಲೀನ ನಿರ್ಧಾರವನ್ನು ವಿರೋಧಿಸಿ ಬೆಂಗಳೂರು, ಚೆನ್ನೈನಲ್ಲಿಯೂ ಪ್ರತಿಭಟನೆ ನಡೆಯಿತು.
ಬೆಂಗಳೂರಿನಲ್ಲಿ ಕೆನರಾ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಸರ್ಕಾರದ ನಿರ್ಧಾರದ ವಿರುದ್ಧ ಘೋಷಣೆ ಕೂಗಲಾಯಿತು.
‘ಕೇಂದ್ರದ ಕ್ರಮ ಸಕಾಲಿಕ ಅಲ್ಲ. ಸೆಪ್ಟೆಂಬರ್ 11ರಂದು ನವದಹೆಲಿಯಲ್ಲಿ ಸಭೆ ಸೇರಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಅವರು ಚೆನ್ನೈನಲ್ಲಿ ತಿಳಿಸಿದ್ದಾರೆ.
ವಿಲೀನಕ್ಕೆ ಸಿದ್ಧತೆ:ವಿಲೀನದ ನಿರ್ಧಾರ ಘೋಷಣೆಯಾದ ಬಳಿಕ ಕೆಲವು ಬ್ಯಾಂಕ್‌ಗಳು ಅದಕ್ಕೆ ಪೂರಕವಾದ ಸಿದ್ಧತೆ ನಡೆಸುತ್ತಿವೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದೇ 5ರಂದು ಆಡಳಿತ ಮಂಡಳಿ ಸಭೆ ನಡೆಸಲಿದೆ. ಕಾರ್ಪೊರೇಷನ್ ಬ್ಯಾಂಕ್ ಸಹ ಸಭೆ ನಡೆಸುವುದಾಗಿ ಹೇಳಿದೆ.
*
ಈ ಹಿಂದಿನ ಎರಡು ವಿಲೀನ ಪ್ರಕ್ರಿಯೆಗಳ ಮೌಲ್ಯಮಾಪನ ಮಾಡದೇ, ಮತ್ತೊಂದು ಸುತ್ತಿನ ವಿಲೀನಕ್ಕೆ ಮುಂದಾಗಿರುವುದು ಸರಿಯಲ್ಲ.
-ಸತೀಶ್ ಶೆಟ್ಟಿ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಉಪಾಧ್ಯಕ್ಷ
*
ಕರಾವಳಿಯ ನಾಲ್ಕು ರಾಷ್ಟ್ರೀಕೃತ ಬ್ಯಾಂಕುಗಳು ವಿಲೀನಗೊಳ್ಳುತ್ತಿದ್ದು, ಈ ಮೂಲಕ ಪ್ರಧಾನಿ ಕಾರ್ಪೊರೇಟ್ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದ್ದಾರೆ.
-ಎಂ.ವೀರಪ್ಪ ಮೊಯಿಲಿ, ಮಾಜಿ ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.