ಮುಂಬೈ: ಮುಂದಿನ ಎರಡು ವರ್ಷಗಳಲ್ಲಿ ಬ್ಯಾಂಕ್‌ನ ತಾಂತ್ರಿಕ ಪರಿಣತ ನೌಕರರ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ತಿಳಿಸಿದೆ.
‘ಪ್ರಸ್ತುತ ಬ್ಯಾಂಕ್‌ನಲ್ಲಿ 1,500 ತಾಂತ್ರಿಕ ನೌಕರರು ಇದ್ದಾರೆ. ಹೊಸದಾಗಿ ಇಷ್ಟೇ ಸಂಖ್ಯೆಯ ನೌಕರರ ನೇಮಕಕ್ಕೆ ತೀರ್ಮಾನಿಸಲಾಗಿದ್ದು, ಮಾಹಿತಿ ತಂತ್ರಜ್ಞಾನ ತಂಡದ ಸಂಖ್ಯೆಯನ್ನು ಮೂರು ಸಾವಿರಕ್ಕೆ ಏರಿಸಲಾಗುವುದು’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದೇಬದತ್ತ ಚಂದ್ ತಿಳಿಸಿದ್ದಾರೆ.
ಬ್ಯಾಂಕ್‌ಗಳಲ್ಲಿ ಮಾಹಿತಿ ತಂತ್ರಜ್ಞಾನ ಪರಿಣತರ ತಂಡದ ಕೊರತೆಯಿದೆ. ಇದರಿಂದಾಗಿ ವಹಿವಾಟಿನ ಕಾರ್ಯ ನಿರ್ವಹಣೆಗೆ ತೊಡಕಾಗುತ್ತಿದೆ. ಹಾಗಾಗಿ, ಐ.ಟಿ ತಂಡವನ್ನು ಸದೃಢಗೊಳಿಸಲು ಮುಂದಾಗಬೇಕು ಎಂದು ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್‌ಗಳಿಗೆ ಸೂಚಿಸಿದೆ.
ಹಾಗಾಗಿ, ಬ್ಯಾಂಕ್‌ಗಳು ಎಂಜಿನಿಯರಿಂಗ್ ಪದವೀಧರರ ನೇಮಕಕ್ಕೆ ಮುಂದಾಗಿವೆ ಎಂದು ಹೇಳಲಾಗಿದೆ.
‘ಬ್ಯಾಂಕ್‌ನಲ್ಲಿ ಸದ್ಯ ತಾಂತ್ರಿಕ ಕೆಲಸಗಳ ನಿರ್ವಹಣೆಗೆ ಗುತ್ತಿಗೆ ಆಧಾರದ ಮೇಲೆ ಪರಿಣತರನ್ನು ನೇಮಿಸಿಕೊಳ್ಳಲಾಗಿದೆ’ ಎಂದು ಚಂದ್ ತಿಳಿಸಿದ್ದಾರೆ.
ಅಲ್ಲದೆ, ಜನರೇಟಿವ್ ಕೃತಕ ಬುದ್ಧಿಮತ್ತೆ ಸೇವೆ ಬಳಕೆಗೆ ಒತ್ತು ನೀಡಲಾಗುವುದು. ಬ್ಯಾಂಕ್ ಮತ್ತು ಗ್ರಾಹಕರ ನಡುವಿನ ಸಂವಾದಾತ್ಮಕ ಸೇವೆ ಒದಗಿಸುವಲ್ಲಿ ಇದು ನೆರವಾಗಲಿದೆ. ತಂತ್ರಜ್ಞಾನ ಮೂಲ ಸೌಕರ್ಯದ ಅಭಿವೃದ್ಧಿಗೆ ಬ್ಯಾಂಕ್ ₹2 ಸಾವಿರ ಕೋಟಿ ವೆಚ್ಚ ಮಾಡಲಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.