ಮುಂಬೈ: ಹಿಂದಿನ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ನ ಒಟ್ಟು 3,898 ಶಾಖೆಗಳನ್ನು ತನ್ನಲ್ಲಿ ವಿಲೀನ ಮಾಡಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ಭಾನುವಾರ ಹೇಳಿದೆ.
2019ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಅನ್ನು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನ ಮಾಡಲಾಗಿದೆ.
‘ಕೋವಿಡ್–19 ತಂದೊಡ್ಡಿದ ಸವಾಲಿನ ಸಂದರ್ಭದಲ್ಲಿಯೇ ನಾವು ಬ್ಯಾಂಕ್ ಶಾಖೆಗಳ ವಿಲೀನ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ’ ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಂಜೀವ್ ಛಡ್ಡಾ ಹೇಳಿದ್ದಾರೆ.
ಗ್ರಾಹಕರಿಗೆ ಸೇರಿದ ಐದು ಕೋಟಿಗಿಂತ ಹೆಚ್ಚಿನ ಖಾತೆಗಳ ವಿವರಗಳನ್ನು ವಿಲೀನ ಮಾಡಲಾಗಿದೆ. ಶಾಖೆಗಳ ವಿಲೀನ ಮಾತ್ರವೇ ಅಲ್ಲದೆ ಎಲ್ಲ ಎಟಿಎಂಗಳನ್ನು, ಕ್ರೆಡಿಟ್ ಕಾರ್ಡ್‌ಗಳನ್ನು ಹಾಗೂ ಪಿಒಎಸ್ (ಪಾಯಿಂಟ್ ಆಫ್ ಸೇಲ್) ಯಂತ್ರಗಳನ್ನು ವಿಲೀನ ಮಾಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಹಿಂದಿನ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ನೀಡಿದ್ದ ಡೆಬಿಟ್ ಕಾರ್ಡ್‌ಗಳು ಅವುಗಳ ಅವಧಿ ಪೂರ್ಣಗೊಳ್ಳುವವರೆಗೆ ಬಳಕೆಗೆ ಲಭ್ಯವಿರಲಿವೆ ಎಂದು ಬ್ಯಾಂಕ್ ಆಫ್ ಬರೋಡಾ ಭರವಸೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.