ADVERTISEMENT

ಬ್ಯಾಂಕ್‌ ಆಫ್‌ ಬರೋಡಾ ಲಾಭ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 10 ಮೇ 2024, 14:23 IST
Last Updated 10 ಮೇ 2024, 14:23 IST
ಬ್ಯಾಂಕ್‌ ಆಫ್‌ ಬರೋಡಾ
ಬ್ಯಾಂಕ್‌ ಆಫ್‌ ಬರೋಡಾ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹4,886 ಕೋಟಿ ನಿವ್ವಳ ಲಾಭ ಗಳಿಸಿದೆ.

2022–23ರ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ₹4,775 ಕೋಟಿ ಲಾಭ ಗಳಿಸಿತ್ತು. ಈ ಲಾಭ ಪ್ರಮಾಣಕ್ಕೆ ಹೋಲಿಸಿದರೆ ಶೇ 2.3ರಷ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕ್‌, ಷೇರುಪೇಟೆಗೆ ಶುಕ್ರವಾರ ತಿಳಿಸಿದೆ.

ಈ ತ್ರೈಮಾಸಿಕದಲ್ಲಿ ವರಮಾನವು ₹29,323 ಕೋಟಿಯಿಂದ ₹33,775 ಕೋಟಿಗೆ ಹೆಚ್ಚಳವಾಗಿದೆ. ಬಡ್ಡಿ ವರಮಾನವು ₹25,857 ಕೋಟಿಯಿಂದ ₹29,583 ಕೋಟಿಗೆ ಏರಿಕೆ ಆಗಿದೆ. 

ADVERTISEMENT

ವಸೂಲಾಗದ ಸಾಲದ ಸರಾಸರಿ ಪ್ರಮಾಣ (ಎನ್‌ಪಿಎ) ಶೇ 3.79ರಿಂದ ಶೇ 2.92ಕ್ಕೆ ಕುಗ್ಗಿದೆ. ನಿವ್ವಳ ಎನ್‌ಪಿಎ ಶೇ 0.89ರಿಂದ ಶೇ 0.68ಕ್ಕೆ ಇಳಿದಿದೆ.

ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ವಸೂಲಾಗದ ಸಾಲಗಳಿಗೆ ತೆಗೆದಿರಿಸಬೇಕಿರುವ ಮೊತ್ತವು ₹1,421 ಕೋಟಿಯಿಂದ ₹1,302 ಕೋಟಿಗೆ ಇಳಿಕೆಯಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

2023–24ರ ಪೂರ್ಣ ಹಣಕಾಸು ವರ್ಷದ ನಿವ್ವಳ ಲಾಭದಲ್ಲಿ ಶೇ 26ರಷ್ಟು ಏರಿಕೆಯಾಗಿದ್ದು, ₹17,789 ಕೋಟಿ ಗಳಿಸಿದೆ. ವರಮಾನವು ₹99,614 ಕೋಟಿಯಿಂದ ₹1.27 ಲಕ್ಷ ಕೋಟಿಗೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.

₹2 ಮುಖಬೆಲೆಯ ಪ್ರತಿ ಷೇರಿಗೆ ₹7.60 ಲಾಭಾಂಶ ನೀಡಲು ಆಡಳಿತ ಮಂಡಳಿಯು ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.