ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡ, ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಶೇಕಡ 0.40ರಷ್ಟು ಕಡಿಮೆ ಮಾಡಿದೆ. ಹೊಸದಾಗಿ ಗೃಹ ಸಾಲ ಪಡೆಯುವವರಿಗೆ ಮಾತ್ರ ಇದು ಅನ್ವಯವಾಗಲಿದೆ. ಹೊಸ ಸಾಲವು ಶೇ 8.50 ಬಡ್ಡಿಗೆ ಲಭ್ಯವಾಗಲಿದೆ.
ಅಲ್ಲದೆ, ಎಂಎಸ್‌ಎಂಇ ವಲಯದ ಉದ್ದಿಮೆಗಳಿಗೆ ನೀಡುವ ಹೊಸ ಸಾಲಕ್ಕೆ ಶೇ 8.40ರಷ್ಟು ಮಾತ್ರ ಬಡ್ಡಿ ವಿಧಿಸುವುದಾಗಿ ಬ್ಯಾಂಕ್ ಹೇಳಿದೆ. ಈ ಕೊಡುಗೆಗಳು ಮಾರ್ಚ್ 31ರವರೆಗೆ ಮಾತ್ರ ಲಭ್ಯವಿರಲಿವೆ ಎಂದು ಪ್ರಕಟಣೆ ತಿಳಿಸಿದೆ. ‘ಇದು ಬ್ಯಾಂಕಿಂಗ್ ಉದ್ಯಮದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಬಡ್ಡಿ ದರಗಳಲ್ಲಿ ಒಂದು, ಇದು ಅತ್ಯಂತ ಸ್ಪರ್ಧಾತ್ಮಕ ದರವೂ ಹೌದು’ ಎಂದು ಬ್ಯಾಂಕ್ ಹೇಳಿದೆ.
ಗೃಹ ಸಾಲಗಳ ಪ್ರೊಸೆಸಿಂಗ್ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ, ಎಂಎಸ್‌ಎಂಇ ಸಾಲಗಳ ಪ್ರೊಸೆಸಿಂಗ್ ಶುಲ್ಕವನ್ನು ಶೇ 50ರಷ್ಟು ಮನ್ನಾ ಮಾಡಲಾಗುವುದು ಎಂದು ಅದು ಹೇಳಿದೆ. ಹೊಸ ಬಡ್ಡಿ ದರಗಳು ಸಾಲ ಪಡೆಯುವವರ ಕ್ರೆಡಿಟ್ ಅಂಕಗಳನ್ನೂ ಆಧರಿಸಿ ಇರುತ್ತವೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.