ಬೆಂಗಳೂರು: ಕೇಂದ್ರ ಸರ್ಕಾರ ಬಜೆಟ್ ಹಾಗೂ ಆರ್ಥಿಕ ಸಮೀಕ್ಷೆ ಮಂಡನೆ ಸಿದ್ಧತೆ ನಡೆಸುತ್ತಿದ್ದರೆ,ಬ್ಯಾಂಕ್ ನೌಕರರ ಸಂಘಟನೆಗಳು 31 ರಿಂದ ಎರಡು ದಿನಗಳ ಮುಷ್ಕರ ನಡೆಸಲು ಮುಂದಾಗಿವೆ.
ವೇತನ ಪರಿಷ್ಕರಣೆಗೆ ಒತ್ತಾಯಿಸಿಒಂಬತ್ತು ಬ್ಯಾಂಕ್ ಕಾರ್ಮಿಕ ಸಂಘಟನೆಗಳನ್ನು ಒಳಗೊಂಡಿರುವ ಸಂಯುಕ್ತ ವೇದಿಕೆಯು (ಯುಎಫ್‌ಬಿಯು) ಈ ಮುಷ್ಕರಕ್ಕೆ ಕರೆ ನೀಡಿದೆ.
ಸಂಸತ್ತಿನ ಬಜೆಟ್ ಅಧಿವೇಶನದ ಆರಂಭದ ದಿನವಾದ ಜ.31 ಮತ್ತು 2020–21ನೇ ಹಣಕಾಸು ವರ್ಷದ ಬಜೆಟ್ ಮಂಡನೆಯಾಗಲಿರುವ ಫೆ.1ರಂದು ಮುಷ್ಕರ ನಡೆಸಲು ನಿರ್ಧರಿಸಿದ್ದು,ದೇಶದಾದ್ಯಂತ ಬ್ಯಾಂಕ್‌ಗಳ ವಹಿವಾಟಿಗೆ ಅಡಚಣೆಯಾಗಲಿದೆ. ಫೆ.2 ಭಾನುವಾರ ಆಗಿರುವುದರಿಂದ ಬ್ಯಾಂಕ್ ರಜೆ ಇರಲಿದೆ. ಇದರಿಂದ ಸತತ ಮೂರು ದಿನ ಸಾರ್ವಜನಿಕರಿಗೆ ಬ್ಯಾಂಕ್ ಸಂಬಂಧಿಸಿದ ವಹಿವಾಟುಗಳಲ್ಲಿ ತೊಂದರೆ ಉಂಟಾಗಲಿದೆ.
ಮುಷ್ಕರ ನಡೆದರೆ ಬ್ಯಾಂಕ್ ಶಾಖೆಗಳು ಸಹ ಕಾರ್ಯನಿರ್ವಹಿಸುವುದಿಲ್ಲ. ಎಟಿಎಂಗಳ ಕಾರ್ಯಾಚರಣೆಗೂ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ.
ಬ್ಯಾಂಕ್ ನೌಕರರ ವೇತನ ಪರಿಷ್ಕರಣೆಯು 2017ರ ನವೆಂಬರ್‌ನಿಂದ ನನೆಗುದಿಗೆ ಬಿದ್ದಿದೆ. ಭಾರತದ ಬ್ಯಾಂಕ್‌ಗಳ ಸಂಘವು (ಐಬಿಎ) ನೌಕರರ ನ್ಯಾಯೋಚಿತ ವೇತನ ಪರಿಷ್ಕರಣೆ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಯುಎಫ್‌ಬಿಯು ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.