ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ತನ್ನ ವಿವಿಧ ಸೇವಾ ಶುಲ್ಕಗಳನ್ನು ಪರಿಷ್ಕರಿಸಿದೆ. ಠೇವಣಿ, ಖಾತೆಯಲ್ಲಿ ಸರಾಸರಿ ತಿಂಗಳ ಬ್ಯಾಲನ್ಸ್ ಹೊಂದುವ ಮತ್ತು ಹಣ ಹಿಂದೆ ಪಡೆಯುವ ಸೇವೆಗಳ ಶುಲ್ಕ ಪರಿಷ್ಕರಿಸಿದೆ.
ಹಣ ಹಿಂದೆ ಪಡೆಯಲು ನಿರ್ಬಂಧ: ಬ್ಯಾಂಕ್ ಖಾತೆಯಲ್ಲಿ ₹ 25 ಸಾವಿರದಷ್ಟು ಸರಾಸರಿ ತಿಂಗಳ ಬ್ಯಾಲನ್ಸ್ ಹೊಂದಿರುವವರು, ಶಾಖೆಯಲ್ಲಿ ಉಚಿತವಾಗಿ ಎರಡು ಬಾರಿ ಹಣ ಹಿಂದೆ ಪಡೆಯಬಹುದು. ₹ 25 ಸಾವಿರದಿಂದ ₹ 50 ಸಾವಿರ ಹೊಂದಿರುವವರು ತಿಂಗಳಿಗೆ 10 ಬಾರಿ ಉಚಿತವಾಗಿ ಹಣ ಹಿಂದೆ ಪಡೆಯಬಹುದು. ಉಚಿತ ಮಿತಿ ನಂತರ ಪ್ರತಿ ವಹಿವಾಟಿಗೆ ₹ 50+ಜಿಎಸ್‌ಟಿ ವಿಧಿಸಲಾಗುವುದು. ₹ 1 ಲಕ್ಷ ಹೊಂದಿರುವವರಿಗೆ ಯಾವುದೇ ಮಿತಿ ವಿಧಿಸಿಲ್ಲ.
ಎಎಂಬಿ ನಿಗದಿ: ಉಳಿತಾಯ ಬ್ಯಾಂಕ್ ಖಾತೆಯಲ್ಲಿ ಗ್ರಾಹಕರು ಹೊಂದಿರಬೇಕಾದ ಸರಾಸರಿ ತಿಂಗಳ ಬ್ಯಾಲನ್ಸ್ (ಎಎಂಬಿ) ಮಹಾನಗರಗಳಲ್ಲಿ₹ 3 ಸಾವಿರ, ಅರೆ–ಪಟ್ಟಣಗಳಲ್ಲಿ ₹ 2,000 ಮತ್ತು ಗ್ರಾಮೀಣ ಪ್ರದೇಶದಲ್ಲಿ ₹ 1,000 ಇರಬೇಕು. ಖಾತೆಯಲ್ಲಿ ಈ ಮೊತ್ತದ ‘ಎಎಂಬಿ’ ನಿರ್ವಹಿಸಲು ಸಾಧ್ಯವಾಗದಿದ್ದರೆ, ಕೊರತೆಯ ಪ್ರಮಾಣ ಆಧರಿಸಿ ಶುಲ್ಕ ಪಾವತಿಸಬೇಕಾಗುತ್ತದೆ.
30 ಅಥವಾ 31 ದಿನಗಳವರೆಗೆ ಗ್ರಾಹಕರ ಉಳಿತಾಯ ಖಾತೆಯಲ್ಲಿ ದಿನದ ಅಂತ್ಯದಲ್ಲಿ ಉಳಿದಿರುವ ಒಟ್ಟು ಮೊತ್ತವನ್ನು 30 ಅಥವಾ 31 ರಿಂದ ಭಾಗಿಸಿದಾಗ ಬರುವ ಮೊತ್ತವು ಆ ತಿಂಗಳ ಸರಾಸರಿ ಬ್ಯಾಲನ್ಸ್ (ಎಎಂಬಿ) ಆಗಿರುತ್ತದೆ.
ಬ್ಯಾಂಕ್ ಖಾತೆಯಿಂದ, ಇನ್ನೊಂದು ಖಾತೆಗೆ ಹಣ ವರ್ಗಾಯಿಸುವ ‘ಎನ್‌ಇಎಫ್‌ಟಿ ಮತ್ತು ದೊಡ್ಡ ಮೊತ್ತದ ‘ಆರ್‌ಟಿಜಿಎಸ್’ನ ಸೇವಾ ಶುಲ್ಕಗಳೂ ಬದಲಾಗಲಿವೆ. ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಯೋನೊ ಆ್ಯಪ್ ಮೂಲಕ (ಡಿಜಿಟಲ್) ವರ್ಗಾವಣೆ ಉಚಿತವಾಗಿರಲಿದೆ. ಬ್ಯಾಂಕ್ ಶಾಖೆಗಳಲ್ಲಿ ಹಣ ವರ್ಗಾಯಿಸಿದರೆ ಶುಲ್ಕ ಪಾವತಿಸಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.