ನವದೆಹಲಿ: ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಮುಷ್ಕರಕ್ಕೆ ಕೆಲವು ಬ್ಯಾಂಕ್ ಸಂಘಟನೆಗಳು ಬೆಂಬಲ ನೀಡಿವೆ. ಹೀಗಾಗಿ, ಸೋಮವಾರ ಮತ್ತು ಮಂಗಳವಾರ ಬ್ಯಾಂಕಿಂಗ್ ಸೇವೆಗಳಿಗೆ ಭಾಗಶಃ ಅಡ್ಡಿಯಾಗುವ ಸಾಧ್ಯತೆ ಇದೆ. ‘ಕೇಂದ್ರ ಸರ್ಕಾರವು ಜನ ವಿರೋಧಿ ಆರ್ಥಿಕ ನೀತಿಗಳು ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ, ಇದನ್ನು ವಿರೋಧಿಸಬೇಕು’ ಎಂದು ಈ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಕಾರ್ಮಿಕ ಸಂಹಿತೆ ನಿಷೇಧಿಸುವುದು ಸೇರಿದಂತೆ ಯಾವುದೇ ಸರ್ಕಾರಿ ಕಂಪನಿಯನ್ನು ಖಾಸಗೀಕರಣಗೊಳಿಸದಂತೆ, ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ (ಎನ್‌ಎಂಪಿ) ಕೈಬಿಡುವಂತೆ, ಗುತ್ತಿಗೆ ನೌಕರರ ಕಾಯಮಾತಿ ಸೇರಿದಂತೆ ಇನ್ನೂ ಹಲವು ಬೇಡಿಕೆಗಳನ್ನು ಇಡಲಾಗಿದೆ.
ಬ್ಯಾಂಕಿಂಗ್ ವಲಯದ ಬೇಡಿಕೆಗಳತ್ತ ಬೆಳಕು ಚೆಲ್ಲುವ ಉದ್ದೇಶದಿಂದ ಈ ಮುಷ್ಕರಕ್ಕೆ ಬೆಂಬಲ ನೀಡಿ, ಮುಷ್ಕರದಲ್ಲಿ ಭಾಗವಹಿಸಲುಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘವು (ಎಐಬಿಇಎ) ನಿರ್ಧರಿಸಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವಂಕಟಾಚಲಂ ತಿಳಿಸಿದ್ದಾರೆ.
ಸರ್ಕಾರಿ, ಖಾಸಗಿ ವಲಯದ ಬ್ಯಾಂಕ್‌ಗಳು, ವಿದೇಶಿ ಬ್ಯಾಂಕ್‌ಗಳು, ಸಹಕಾರಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ನೌಕರರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.
ಮುಷ್ಕರದಿಂದಾಗಿ ಬ್ಯಾಂಕಿಂಗ್ ಸೇವೆಯಲ್ಲಿ ಸ್ವಲ್ಪ ಮಟ್ಟಿನ ಸಮಸ್ಯೆ ಎದುರಾಗಬಹುದು ಎಂದು ಎಸ್‌ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹಲವು ಸರ್ಕಾರಿ ಬ್ಯಾಂಕ್‌ಗಳು ಹೇಳಿವೆ. ಎರಡೂ ದಿನಗಳಲ್ಲಿ ಕಚೇರಿಗಳು ಮತ್ತು ಶಾಖೆಗಳಲ್ಲಿ ಎಂದಿನಂತೆಯೇ ಕಾರ್ಯಾಚರಣೆ ನಡೆಸುವ ಸಲುವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಎಸ್‌ಬಿಐ ಹೇಳಿದೆ.
ಬ್ಯಾಂಕಿಂಗ್ ಕೆಲಸಗಳು ಸುಗಮವಾಗಿ ನಡೆಯಲು ಬೇಕಾದ ಎಲ್ಲ ಕ್ರಮ ತೆಗೆದುಕೊಳ್ಳಲಾಗಿದೆ. ಮುಷ್ಕರ ತೀವ್ರಗೊಂಡರೆ ಬ್ಯಾಂಕಿಂಗ್ ಸೇವೆಗಳಿಗೆ ಅಡ್ಡಿಯಾಗಬಹುದು ಎಂದು ಕೆನರಾ ಬ್ಯಾಂಕ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.