ದೇಶದಲ್ಲಿ ಮೊದಲ ಬಾರಿಗೆ 1969 ರಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣ ಪ್ರಕ್ರಿಯೆ ನಡೆಯಿತು. ಅದಾಗಿ ಅರ್ಧ ಶತಮಾನದ ಬಳಿಕ ಈಗ ಕೇಂದ್ರ ಸರ್ಕಾರವು ತನ್ನ ಸ್ವಾಮ್ಯದಲ್ಲಿ ಇರುವ ಬ್ಯಾಂಕ್‌ಗಳ ಮಹಾವಿಲೀನ ಪ್ರಕ್ರಿಯೆ ಘೋಷಿಸಿದೆ. ಹತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ನಾಲ್ಕು ಬ್ಯಾಂಕ್‌ಗಳನ್ನಾಗಿ ವಿಲೀನಗೊಳಿಸಲು ರೂಪುರೇಷೆ ಸಿದ್ಧವಾಗಿದೆ. ಬಲಿಷ್ಠ ಬ್ಯಾಂಕಿಂಗ್ ವ್ಯವಸ್ಥೆಗೆ ಅಡಿಗಲ್ಲು ಹಾಕುತ್ತಿರುವ ಈ ಹೊತ್ತಿನಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಭವಿಷ್ಯದ ಬಗ್ಗೆ ಬೆಳಕು ಚೆಲ್ಲುವ ನೋಟ ಇಲ್ಲಿದೆ.
2025 ರ ವೇಳೆಗೆ ಕೇಂದ್ರ ಸರ್ಕಾರ ದೇಶದ ಆರ್ಥಿಕತೆಯ ಗಾತ್ರವನ್ನು ₹ 350 ಲಕ್ಷ ಕೋಟಿ ಮೊತ್ತಕ್ಕೆ ಹೆಚ್ಚಿಸುವ ಮಹಾತ್ವಾಕಾಂಕ್ಷೆಯ ಗುರಿ ಹೊಂದಿದೆ. ಈ ಗುರಿಯತ್ತ ಸಾಗುವ ನಿಟ್ಟಿನಲ್ಲಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಒಂದು ಪ್ರಮುಖ ಹೆಜ್ಜೆ ಎನ್ನಬಹುದು. ದೇಶದ ಆರ್ಥಿಕತೆ ಬೆಳೆಯುವಲ್ಲಿ ಬ್ಯಾಂಕ್‌ಗಳು ಮಹತ್ತರ ಪಾತ್ರ ವಹಿಸುತ್ತವೆ. ದೊಡ್ಡ ಉದ್ದಿಮೆಗಳು ದೇಶದಲ್ಲಿ ನೆಲೆ ಕಂಡುಕೊಳ್ಳಬೇಕೆಂದರೆ ಅವುಗಳ ಬೆಳವಣಿಗೆಗಳಿಗೆ ಬ್ಯಾಂಕ್‌ಗಳು ಬೃಹತ್ ಮೊತ್ತದ ಸಾಲ ಸೌಲಭ್ಯ ನೀಡಲು ಶಕ್ತಗೊಳ್ಳಬೇಕು. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಸ್ಪರ್ಧಾತ್ಮಕತೆ ಮತ್ತು ಕಾರ್ಯದಕ್ಷತೆ ಹೆಚ್ಚದಿದ್ದರೆ ದೇಶದ ಪ್ರಗತಿಗೆ ಹಿನ್ನಡೆಯಾಗುತ್ತದೆ.
ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಗೆ 27 ವರ್ಷಗಳ ಇತಿಹಾಸವಿದೆ. 1991 ರಲ್ಲೇ ಆರ್‌ಬಿಐ ಮಾಜಿ ಗವರ್ನರ್ ಎಂ. ನರಸಿಂಹಂ ನೇತೃತ್ವದ ಸಮಿತಿಯು, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಬಲವರ್ಧನೆಗೆ ವಿಲೀನ ಪ್ರಕ್ರಿಯೆಯೇ ಮದ್ದು ಎಂದು ಪ್ರತಿಪಾದಿಸಿತ್ತು. ಸರ್ಕಾರಿ ಸ್ವಾಮ್ಯದ 10 ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ನಾಲ್ಕು ಬಲಿಷ್ಠ ಬ್ಯಾಂಕ್‌ಗಳನ್ನಾಗಿ ರೂಪಿಸುವ ವಿಚಾರ ಈ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.
ಚೀನಾ ಮುಂದೆ; ಭಾರತ ಹಿಂದೆ
ವಿಶ್ವದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಮ್ಮ ಕೂಗಿಗೆ ಸ್ಪಂದನೆ ಸಿಗಬೇಕಾದರೆ ನಾವು ಬಲಿಷ್ಠರಾಗಬೇಕು. ಎಸ್‌ಬಿಐ ನಮ್ಮ ದೇಶದ ಅತಿ ದೊಡ್ಡ ಬ್ಯಾಂಕ್ ಎಂದು ನಾವು ಹೆಮ್ಮಪಡುತ್ತಿರಬಹುದು. ಆದರೆ, ವಿಶ್ವದ ಬ್ಯಾಂಕಿಂಗ್ ದಿಗ್ಗಜರ ಪಟ್ಟಿಯಲ್ಲಿ ಭಾರತದ ಅಗ್ರಜ ಎನ್ನಿಸಿಕೊಳ್ಳುವ ಎಸ್‌ಬಿಐ 55 ನೇ ಸ್ಥಾನದಲ್ಲಿದೆ. ವಿಶ್ವದ ಹತ್ತು ಬಲಿಷ್ಠ ಬ್ಯಾಂಕ್‌ಗಳ ಪಟ್ಟಿಯಲ್ಲಿ ಮೊದಲ ನಾಲ್ಕು ಬ್ಯಾಂಕ್‌ಗಳು ಚೀನಾದಲ್ಲಿವೆ.
ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಹೊಸ ಪರ್ವ
ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ₹52.051 ಲಕ್ಷ ಕೋಟಿ ವ್ಯವಹಾರ ಗಾತ್ರದೊಂದಿಗೆ ಎಸ್‌ಬಿಐ ಮೊದಲ ಸ್ಥಾನದಲ್ಲಿದೆ. ವಿಲೀನದ ನಂತರ ಎರಡನೇ ಸ್ಥಾನಕ್ಕೇರಲಿರುವ ಪಂಜಾಬ್ ನ್ಯಾಷನಲ್+ ಒರಿಯಂಟಲ್ +ಯುನೈಟೆಡ್ ಬ್ಯಾಂಕ್‌ನ ವ್ಯವಹಾರ ಗಾತ್ರ ₹17.94 ಲಕ್ಷ ಕೋಟಿಯಷ್ಟಿದೆ. ಬ್ಯಾಂಕ್ ಆಫ್ ಬರೋಡದ ವ್ಯವಹಾರ ಗಾತ್ರ ₹16.13 ಲಕ್ಷ ಕೋಟಿಯಷ್ಟಿದ್ದು ಮೂರನೇ ಸ್ಥಾನದಲ್ಲಿದೆ. ವಿಲೀನದ ಬಳಿಕ ಕೆನರಾ + ಸಿಂಡಿಕೇಟ್ ಬ್ಯಾಂಕ್ ₹15.20 ಲಕ್ಷ ಕೋಟಿ ವ್ಯವಹಾರದೊಂದಿಗೆ ನಾಲ್ಕನೇ ಸ್ಥಾನದಲ್ಲಿರಲಿವೆ. ಯೂನಿಯನ್+ ಆಂಧ್ರ + ಕಾರ್ಪೊರೇಷನ್ ಬ್ಯಾಂಕ್ ಒಟ್ಟುಗೂಡಿದ ನಂತರದಲ್ಲಿ ₹14.59 ಲಕ್ಷ ಕೋಟಿ ಗಾತ್ರದೊಂದಿಗೆ 5 ನೇ ಸ್ಥಾನದಲ್ಲಿರಲಿವೆ.
ಖಾಸಗಿ V/S ಸರ್ಕಾರಿ ಬ್ಯಾಂಕ್ ಮತ್ತು ವಿಲೀನ
1980 ರಿಂದ 2000 ರ ನಡುವೆ ದೇಶದಲ್ಲಿ 10 ಖಾಸಗಿ ಬ್ಯಾಂಕ್‌ಗಳು ಆರಂಭವಾದವು. 2001 ರಲ್ಲಿ ಮತ್ತೆ ಎರಡು ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಸರ್ಕಾರ ಲೈಸೆನ್ಸ್ ನೀಡಿತು. ಹೆಚ್ಚೆಚ್ಚು ಎಟಿಎಂ, ಅಲರ್ಟ್ ಎಸ್ಎಂಎಸ್, ಇಂಟರ್‌ನೆಟ್ ಬ್ಯಾಂಕಿಂಗ್ , ಮೊಬೈಲ್ ಬ್ಯಾಂಕಿಂಗ್ ಹೀಗೆ ಗ್ರಾಹಕರಿಗಾಗಿ ಉತ್ತಮ ಸೇವೆಗಳನ್ನು ಖಾಸಗಿ ವಲಯದ ಬ್ಯಾಂಕ್‌ಗಳು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗಿಂತ ವೇಗವಾಗಿ ಪೂರೈಸಿದವು. ಇದರ ಪರಿಣಾಮವಾಗಿ ಖಾಸಗಿ ಬ್ಯಾಂಕ್ ಗಳು ಜನರ ವಿಶ್ವಾಸ ಗಳಿಸಿ ವ್ಯವಹಾರವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುತ್ತಾ ಸಾಗಿದವು.
ದತ್ತಾಂಶಗಳ ಪ್ರಕಾರ, ಖಾಸಗಿ ಬ್ಯಾಂಕ್‌ಗಳಲ್ಲಿ ಉದ್ಯೋಗಿಯ ತಲಾ ಲಾಭಾಂಶ ಶೇ 10.6 ರಿಂದ ಶೇ 1.4 ರಷ್ಟಿದ್ದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಇದು ಶೇ 5.5 ರಿಂದ ಶೇ 7 ರಷ್ಟು ಮಾತ್ರ ಇದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ವಸೂಲಾಗದ ಸಾಲದ ಪ್ರಮಾಣ ಹೆಚ್ಚಿರುವುದರಿಂದ ಸಾಲ ಮಂಜೂರಾತಿಯೂ ಕಡಿಮೆ. ಠೇವಣಿ ಸಂಗ್ರಹಣಿಯಲ್ಲೂ ಖಾಸಗಿ ಬ್ಯಾಂಕ್‌ಗಳು ಮುಂದಿವೆ. ಮಾರ್ಚ್ 2017 ರ ಅಂಕಿ ಅಂಶದಂತೆ ಸರ್ಕಾರಿ ಬ್ಯಾಂಕ್ ಠೇವಣಿ ಸಂಗ್ರಹ ಶೇ 6.5 ರಷ್ಟಿದ್ದರೆ ಖಾಸಗಿ ಬ್ಯಾಂಕ್‌ನ ಠೇವಣಿ ಶೇ 19.6ರಷ್ಟಿದೆ. ಆದ್ದರಿಂದ ಈಗಲೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಹಣಕಾಸಿನ ಅಗತ್ಯಗಳಿಗೆ ಸರ್ಕಾರದ ಮೇಲೆ ಅವಲಂಬಿತವಾಗಿವೆ. ಕೇಂದ್ರ ಸರ್ಕಾರ ಬ್ಯಾಂಕ್‌ಗಳಿಗೆ 55,250 ಕೋಟಿ ಪುನರ್ಧನ ಘೋಷಣೆ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಪ್ರತಿಭೆಗಳ ಕೊರತೆ
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಪ್ರತಿಭೆಗಳ ಕೊರತೆ ಇದೆ ಎನ್ನುವುದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಚೀಫ್ ರಿಸ್ಕ್ ಆಫೀಸರ್ ನೇಮಕಕ್ಕೆ ಅನುಮತಿ ಕೊಟ್ಟಿದ್ದಾರೆ. ಮೋದಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಕಾರ್ಯದಕ್ಷತೆ ಇರುವ ಅಧಿಕಾರಿಗಳನ್ನು ಹೊರಗಿನಿಂದ ನೇಮಿಸುವ ಒಳ್ಳೆಯ ಪ್ರಯತ್ನ ನಡೆದಿದೆ. ಸಿಟಿ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿ. ಎಸ್ ಜಯಕುಮಾರ್ ಈಗ ಬ್ಯಾಂಕ್ ಆಫ್ ಬರೋಡಾದ ನೇತೃತ್ವ ವಹಿಸಿಕೊಂಡಿದ್ದಾರೆ. ಹಾಗೆಯೇ ಖಾಸಗಿ ವಲಯದಲ್ಲಿದ್ದ ರಾಕೇಶ್ ಶರ್ಮಾ 2015 ರಿಂದ ಐಡಿಬಿಐ ಸಾರಥಿಯಾಗಿದ್ದಾರೆ.
ವಿಲೀನ ಇತಿಹಾಸ
ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಗೆ ದಶಕಗಳ ಇತಿಹಾಸವಿದೆ. 1993-94 ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ನ್ಯೂ ಬ್ಯಾಂಕ್ ಆಫ್ ಇಂಡಿಯಾ ವಿಲೀನಗೊಳಿಸಲಾಯಿತು. 2004 ರಲ್ಲಿ ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಗ್ಲೋಬಲ್ ಟ್ರಸ್ಟ್ ಬ್ಯಾಂಕ್‌ಗಳನ್ನು ಒಟ್ಟುಗೂಡಿಸಲಾಯಿತು. 2010 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂದೋರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಭಾಗವಾಯಿತು. 2017 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್- ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಟ್ರವಾಂಕೂರ್ ಮತ್ತು ಭಾರತೀಯ ಮಹಿಳಾ ಬ್ಯಾಂಕ್‌ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜತೆ ವಿಲೀನಗೊಳಿಸಲಾಯಿತು. 2019 ರಲ್ಲಿ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಗಳನ್ನು ಬ್ಯಾಂಕ್ ಆಫ್ ಬರೋಡಾ ಜತೆ ಸೇರಿಸಲಾಯಿತು.
ವೆಚ್ಚ ಉಳಿತಾಯದ ಜತೆ ಉನ್ನತ ಸೇವೆ
ವಿಲೀನದಿಂದ ದೊಡ್ಡ ಮೊತ್ತದ ನಿರ್ವಹಣಾ ವೆಚ್ಚ ಉಳಿತಾಯವಾಗುವ ಜತೆಗೆ ಉನ್ನತ ಸೇವೆ ನೀಡಲು ಸಹಾಯವಾಗುತ್ತದೆ. ಸಣ್ಣ ಸಣ್ಣ ಗಾತ್ರದ ಬ್ಯಾಂಕ್ ಗಳನ್ನು ಒಟ್ಟುಗೂಡಿಸಿ ಒಂದು ಬಲಿಷ್ಠ ಬ್ಯಾಂಕಿಂಗ್ ವ್ಯವಸ್ಯೆ ನಿರ್ಮಾಣ ಮಾಡಿದರೆ ತಂತ್ರಜ್ಞಾನ ವೆಚ್ಚ, ಜಾಹೀರಾತು ಮತ್ತು ಪ್ರಚಾರ ವೆಚ್ಚ, ಮಾರುಕಟ್ಚೆ ವಿಸ್ತರಣೆ ವೆಚ್ಚ, ಮಾನವ ಸಂಪನ್ಮೂಲ ವೆಚ್ಚ, ಆಡಳಿತ ನಿರ್ವಹಣಾ ವೆಚ್ಚ ಸೇರಿ ಅನೇಕ ರೀತಿಯ ವೆಚ್ಚಗಳನ್ನು ಗಣನೀಯವಾಗಿ ತಗ್ಗಿಸಿಕೊಳ್ಳಬಹುದು. ಇದರಿಂದ ಕ್ರಮೇಣ ಹಣಕಾಸಿನ ಅಗತ್ಯಗಳಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಸರ್ಕಾರದ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಬಹುದು.
(ಲೇಖಕ, ಸುವಿಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.