ನವದೆಹಲಿ: ಎನ್‌ಪಿಎ ಎಂದು ವರ್ಗೀಕೃತ ಆಗಿದ್ದ ಒಟ್ಟು ₹10 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತದ ಸಾಲವನ್ನು ಕಳೆದ ಒಂಬತ್ತು ವರ್ಷಗಳಲ್ಲಿ ವಸೂಲು ಮಾಡಲು ಬ್ಯಾಂಕುಗಳಿಗೆ ಸಾಧ್ಯವಾಗಿದೆ. ಅನುತ್ಪಾದಕ ಸಾಲದ ಪ್ರಮಾಣವನ್ನು ತಗ್ಗಿಸಲು ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಕೈಗೊಂಡ ಕ್ರಮಗಳು ಬ್ಯಾಂಕುಗಳ ನೆರವಿಗೆ ಬಂದಿವೆ.
ಆರ್‌ಬಿಐ ನೀಡಿರುವ ಮಾಹಿತಿ ಪ್ರಕಾರ ವಾಣಿಜ್ಯ ಬ್ಯಾಂಕುಗಳು, ಅನುತ್ಪಾದಕ ಎಂದು ಪರಿಗಣಿತವಾಗಿದ್ದ ಒಟ್ಟು ₹10.16 ಲಕ್ಷ ಕೋಟಿ ಮೊತ್ತದ ಸಾಲವನ್ನು ಕಳೆದ ಒಂಬತ್ತು ಹಣಕಾಸು ವರ್ಷಗಳಲ್ಲಿ ವಸೂಲು ಮಾಡಿವೆ.
ವಾಣಿಜ್ಯ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ನೀಡಿರುವ, ₹20 ಕೋಟಿಗಿಂತ ಹೆಚ್ಚಿನ ಮೊತ್ತದ ಅನುತ್ಪಾದಕ ಸಾಲಗಳ ಪ್ರಮಾಣವು ಕಳೆದ ಐದು ವರ್ಷಗಳಲ್ಲಿ ಕಡಿಮೆ ಅಗಿದೆ ಎಂದು ಆರ್‌ಬಿಐ ನೀಡಿರುವ ಅಂಕಿ–ಅಂಶಗಳು ಹೇಳಿವೆ.
2018–19ರ ಕೊನೆಯಲ್ಲಿ ಎನ್‌ಪಿಎ ಮೊತ್ತವು ₹7.09 ಲಕ್ಷ ಕೋಟಿ ಆಗಿತ್ತು. ಇದು ಈ ವರ್ಷದ ಮಾರ್ಚ್ ಅಂತ್ಯಕ್ಕೆ ₹2.66 ಲಕ್ಷ ಕೋಟಿಗೆ ಇಳಿಕೆಯಾಗಿದೆ.
ಎನ್‌ಪಿಎ ಪ್ರಮಾಣ ತಗ್ಗಿಸಲು ಕೇಂದ್ರ ಹಾಗೂ ಆರ್‌ಬಿಐ ವ್ಯಾಪಕ ಕ್ರಮಗಳನ್ನು ಕೈಗೊಂಡಿವೆ ಎಂದು ಈ ವಾರದ ಆರಂಭದಲ್ಲಿ ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರಾಡ್ ಅವರು ವಿವರಿಸಿದ್ದಾರೆ.
ಸಾಲ ವಸೂಲಿ ನ್ಯಾಯಮಂಡಳಿಗಳ (ಡಿಆರ್‌ಟಿ) ವ್ಯಾಪ್ತಿಯನ್ನು ಹಿಗ್ಗಿಸಿ, ಅವು ಹೆಚ್ಚಿನ ಮೊತ್ತದ ಸಾಲಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸಲು ಸಾಧ್ಯವಾಗುವಂತೆ ಮಾಡಲಾಗಿದೆ. ಇದರ ಪರಿಣಾಮವಾಗಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಸಾಲವನ್ನು ವಸೂಲು ಮಾಡಲು ಸಾಧ್ಯವಾಗಿದೆ ಎಂದು ಅವರು ವಿವರಿಸಿದ್ದಾರೆ.
ಉದ್ದೇಶಪೂರ್ವಕ ಸುಸ್ತಿದಾರರಿಗೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಹೊಸ ಸಾಲ ನೀಡುತ್ತಿಲ್ಲ. ಅಲ್ಲದೆ, ಉದ್ದೇಶಪೂರ್ವಕ ಸುಸ್ತಿದಾರರು ಐದು ವರ್ಷಗಳವರೆಗೆ ಯಾವುದೇ ಹೊಸ ಕಂಪನಿ ಆರಂಭಿಸದಂತೆ ನಿರ್ಬಂಧಿಸಲಾಗುತ್ತದೆ. ಉದ್ದೇಶಪೂರ್ವಕ ಸುಸ್ತಿದಾರರು ಹಾಗೂ ಅವರನ್ನು ಆಡಳಿತ ಮಂಡಳಿಯಲ್ಲಿ ಹೊಂದಿರುವ ಕಂಪನಿಗಳು ಬಂಡವಾಳ ಸಂಗ್ರಹಿಸಲು ಬಂಡವಾಳ ಮಾರುಕಟ್ಟೆಯನ್ನು ಕೂಡ ಬಳಸಲು ಅವಕಾಶ ನೀಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.