ADVERTISEMENT

ಬ್ಯಾಂಕ್‌ಗಳ ಕಿವಿ ಹಿಂಡಿದ ನಿರ್ಮಲಾ ಸೀತಾರಾಮನ್‌

ಪಿಟಿಐ
Published 10 ಆಗಸ್ಟ್ 2024, 15:48 IST
Last Updated 10 ಆಗಸ್ಟ್ 2024, 15:48 IST
<div class="paragraphs"><p>ಶನಿವಾರ ನಡೆದ ಆರ್‌ಬಿಐನ ಆಡಳಿತ ಮಂಡಳಿ ಸಭೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಗವರ್ನರ್‌ ಶಕ್ತಿಕಾಂತ ದಾಸ್‌ ಆಗಮಿಸಿದ ಕ್ಷಣ </p></div>

ಶನಿವಾರ ನಡೆದ ಆರ್‌ಬಿಐನ ಆಡಳಿತ ಮಂಡಳಿ ಸಭೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಗವರ್ನರ್‌ ಶಕ್ತಿಕಾಂತ ದಾಸ್‌ ಆಗಮಿಸಿದ ಕ್ಷಣ

   

–ಪಿಟಿಐ ಚಿತ್ರ

ನವದೆಹಲಿ: ‘ಕೌಟುಂಬಿಕ ಉಳಿತಾಯವು ಬ್ಯಾಂಕ್‌ಗಳ ಠೇವಣಿಗಳಲ್ಲಿ ಹೂಡಿಕೆಯಾಗುತ್ತಿಲ್ಲ. ಪರ್ಯಾಯ ಹೂಡಿಕೆಯತ್ತ ಮುಖ ಮಾಡಿದೆ. ಹಾಗಾಗಿ, ಬ್ಯಾಂಕ್‌ಗಳು ಕೋರ್‌ ಬ್ಯಾಂಕಿಂಗ್‌ ವಹಿವಾಟಿಗೆ ಒತ್ತು ನೀಡಬೇಕು. ಜೊತೆಗೆ, ಠೇವಣಿ ಸಂಗ್ರಹದ ಹೆಚ್ಚಳಕ್ಕೆ ಹೊಸ ಹಾಗೂ ಆಕರ್ಷಕ ಯೋಜನೆಗಳನ್ನು ರೂಪಿಸಬೇಕಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಲಹೆ ನೀಡಿದ್ದಾರೆ.

ADVERTISEMENT

ಶನಿವಾರ ನಡೆದ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಆಡಳಿತ ಮಂಡಳಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಠೇವಣಿ ಮತ್ತು ಸಾಲವು ರಥದ ಎರಡು ಚಕ್ರಗಳಿದ್ದಂತೆ. ಠೇವಣಿ ಚಕ್ರವು ನಿಧಾನಗತಿಯಲ್ಲಿ ಚಲಿಸುತ್ತಿರುತ್ತದೆ’ ಎಂದರು.

ಠೇವಣಿ ಸಂಗ್ರಹ ಮತ್ತು ಸಾಲ ನೀಡುವಿಕೆಯಲ್ಲಿ ಬ್ಯಾಂಕ್‌ಗಳು ಪರಿಣಾಮಕಾರಿಯಾದ ಕ್ರಮಗಳನ್ನು ಅನುಸರಿಸಬೇಕಿದೆ. ಈ ಬಗ್ಗೆ ಆರ್‌ಬಿಐ ಮತ್ತು ಕೇಂದ್ರ ಸರ್ಕಾರವು ಇದನ್ನೇ ಒತ್ತಿ ಹೇಳುತ್ತಿವೆ ಎಂದರು.

ಪ್ರಸ್ತುತ ಬ್ಯಾಂಕ್‌ಗಳ ಠೇವಣಿ ಸಂಗ್ರಹ ಮತ್ತು ಸಾಲ ನೀಡುವಿಕೆಯಲ್ಲಿ ಹೊಂದಾಣಿಕೆಯ ಸಮಸ್ಯೆ ತಲೆದೋರಿದೆ ಎಂದರು. 

ಬಡ್ಡಿದರ ನಿರ್ವಹಣೆಗೆ ಸಂಬಂಧಿಸಿದಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಕೆಲವು ಸ್ವಾತಂತ್ರ್ಯ ನೀಡಿದೆ. ಇದನ್ನು ಬಳಸಿಕೊಳ್ಳುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಸಂಗ್ರಹಕ್ಕೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.

ದೊಡ್ಡ ಅಥವಾ ಬೃಹತ್‌ ಠೇವಣಿಗಳ ಸಂಗ್ರಹಕ್ಕೆ ಒತ್ತು ನೀಡುವ ಬದಲು ಸಣ್ಣ ಉಳಿತಾಯ ಠೇವಣಿ ಸಂಗ್ರಹಕ್ಕೆ ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಸಣ್ಣ ಉಳಿತಾಯವೇ ಬ್ಯಾಂಕ್‌ಗಳಿಗೆ ಬ್ರೆಡ್‌ ಮತ್ತು ಬೆಣ್ಣೆ ಇದ್ದಂತೆ. ಇದರಿಂದ ಹಣದ ಹರಿವು ಹೆಚ್ಚಲಿದೆ. ಈ ಹಿಂದೆಯೇ ಇದರತ್ತ ಗಮನಹರಿಸಿದ್ದರೆ ಈಗ ನಾವು (ಬ್ಯಾಂಕ್‌ಗಳು) ತೊಂದರೆಗೆ ಸಿಲುಕುತ್ತಿರಲಿಲ್ಲ. ನಾವು ಸಂಪೂರ್ಣವಾಗಿ ಇನ್ನೊಂದು ಬದಿಗೆ ಹೋಗಿದ್ದೇವೆ. ಈಗ ಗುರಿ ಸಾಧನೆಗಾಗಿ ಬೃಹತ್ ಠೇವಣಿಗಳ ಹಿಂದೆ ಬಿದ್ದಿದ್ದೇವೆ ಎಂದರು.

‘ಬಡ್ಡಿದರ ವ್ಯತ್ಯಾಸ ಸರಿ‍ಪಡಿಸಿ’ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ಮಾತನಾಡಿ ‘ಠೇವಣಿ ಮತ್ತು ಸಾಲದ ಮೇಲಿನ ಬಡ್ಡಿದರದ ನಡುವೆ ಶೇ 3ರಿಂದ ಶೇ 4ರಷ್ಟು ವ್ಯತ್ಯಾಸವಿದೆ. ಠೇವಣಿಗೆ ನೀಡುತ್ತಿರುವ ಬಡ್ಡಿ ಪ್ರಮಾಣ ತೀರಾ ಕಡಿಮೆಯಿದೆ ಎಂದರು. ಬ್ಯಾಂಕ್‌ಗಳ ಶಾಖೆಯ ನೆಟ್‌ವರ್ಕ್ಸ್‌ ದೊಡ್ಡದಿದೆ. ಇವುಗಳ ಮೂಲಕ ಠೇವಣಿ ಸಂಗ್ರಹಕ್ಕೆ ಒತ್ತು ನೀಡಬೇಕಿದೆ ಎಂದು ಹೇಳಿದರು. ‘ಬ್ಯಾಂಕ್‌ಗಳು ನೀಡುವ ಸಾಲದ ಮೇಲಿನ ಬಡ್ಡಿದರವು ಅನಿಯಂತ್ರಿತವಾಗಿದೆ. ಬಡ್ಡಿದರ ನಿರ್ಧರಿಸುವಲ್ಲಿ ಬ್ಯಾಂಕ್‌ಗಳು ಸ್ವತಂತ್ರವಾಗಿವೆ. ಹಾಗಾಗಿ ಬಂಡವಾಳ ಸಂಗ್ರಹಿಸಲು ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಬಹುದಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.