ADVERTISEMENT

ಬ್ಯಾಂಕ್‌ಗಳು ₹9.90 ಲಕ್ಷ ಕೋಟಿ ಸಾಲ ರೈಟ್‌ಆಫ್‌ ಮಾಡಿವೆ: ಕೇಂದ್ರ ಸರ್ಕಾರ

ಪಿಟಿಐ
Published 6 ಆಗಸ್ಟ್ 2024, 15:51 IST
Last Updated 6 ಆಗಸ್ಟ್ 2024, 15:51 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2019–20ರಿಂದ 2023–24ರ ವರೆಗೆ ಬ್ಯಾಂಕ್‌ಗಳು ₹9.90 ಲಕ್ಷ ಕೋಟಿ ಮೊತ್ತದ ಸಾಲವನ್ನು ರೈಟ್‌ಆಫ್‌ ಮಾಡಿವೆ ಎಂದು ಕೇಂದ್ರ ಸರ್ಕಾರವು, ಸಂಸತ್‌ಗೆ ತಿಳಿಸಿದೆ. 

‘2022–23ರಲ್ಲಿ 2.08 ಲಕ್ಷ ಕೋಟಿ ಹಾಗೂ 2023–24ರಲ್ಲಿ ₹1.70 ಲಕ್ಷ ಕೋಟಿ ಸಾಲವನ್ನು ರೈಟ್‌ಆಫ್‌ (ವಸೂಲಿ ಪ್ರಕ್ರಿಯೆಯು ಬಹುತೇಕ ಸ್ಥಗಿತಗೊಂಡಿರುವುದು) ಮಾಡಲಾಗಿದೆ’ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್‌ ಚೌಧರಿ ಅವರು, ಮಂಗಳವಾರ ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

2019–20ರಲ್ಲಿ ₹2.34 ಲಕ್ಷ ಕೋಟಿ, 2020–21ರಲ್ಲಿ ₹2.02 ಲಕ್ಷ ಕೋಟಿ ಹಾಗೂ 2021–22ರಲ್ಲಿ ₹1.74 ಲಕ್ಷ ಕೋಟಿ ಸಾಲವು ರೈಟ್‌ಆಫ್‌ ಆಗಿದೆ ಎಂದು ವಿವರಿಸಿದ್ದಾರೆ. 

ADVERTISEMENT

ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿ ಮತ್ತು ಬ್ಯಾಂಕ್‌ಗಳ ಆಡಳಿತ ಮಂಡಳಿಗಳ ನೀತಿ ಅನ್ವಯ, ಸತತವಾಗಿ ನಾಲ್ಕು ವರ್ಷಗಳ ಕಾಲ ಸುಸ್ತಿದಾರರು ಸಾಲದ ಬಗ್ಗೆ ಪ್ರತಿಕ್ರಿಯೆ ನೀಡದಿದ್ದರೆ ಆ ಸಾಲದ ಮೊತ್ತವನ್ನು ಬ್ಯಾಂಕ್‌ಗಳು ವಸೂಲಾಗದ ಸಾಲದ (ಎನ್‌ಪಿಎ) ಪಟ್ಟಿಗೆ ಸೇರಿಸುತ್ತವೆ. ಸಾಲಗಳನ್ನು ಬ್ಯಾಲೆನ್ಸ್‌ಶೀಟ್‌ನಿಂದ ಹೊರಗಿಡುತ್ತವೆ ಎಂದು ತಿಳಿಸಿದ್ದಾರೆ.

‘ಬ್ಯಾಂಕ್‌ಗಳು ತಮ್ಮ ಲೆಕ್ಕಪತ್ರ ಸರಿಪಡಿಸಿಕೊಳ್ಳಲು ಒತ್ತು ನೀಡುತ್ತವೆ. ತೆರಿಗೆ ‍ಪ್ರಯೋಜನ ಪಡೆಯುವ ಜೊತೆಗೆ ಪರಿಣಾಮಕಾರಿಯಾಗಿ ಬಂಡವಾಳ ಬಳಸಿಕೊಳ್ಳಲು ಮುಂದಾಗುತ್ತವೆ. ಹಾಗಾಗಿ, ಆರ್‌ಬಿಐ ಮಾರ್ಗಸೂಚಿ ಮತ್ತು ಆಡಳಿತ ಮಂಡಳಿಗಳ ನೀತಿಗಳಿಗೆ ಅನುಗುಣವಾಗಿ ವಸೂಲಾಗದ ಸಾಲವನ್ನು ರೈಟ್‌ಆಫ್‌ ಮಾಡುತ್ತವೆ ಎಂದು ವಿವರಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ರೈಟ್ಆಫ್‌ ಮಾಡಲಾದ ಸಾಲದ ಪೈಕಿ ₹1.84 ಲಕ್ಷ ಕೋಟಿ (ಶೇ 18ರಷ್ಟು) ಸಾಲವನ್ನಷ್ಟೇ ವಸೂಲು ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ನಗದು ರಕ್ಷಣೆ ಅನುಪಾತ ಎಷ್ಟು?

ಬ್ಯಾಂಕ್‌ಗಳು ನಗದು ಕೊರತೆ ಸಮಸ್ಯೆಯಿಂದ ಪಾರಾಗುವ ಬಗ್ಗೆ ಆರ್‌ಬಿಐ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವ ಬ್ಯಾಂಕ್‌ಗಳ ನಗದು ರಕ್ಷಣೆ ಅನುಪಾತ (ಎಲ್‌ಸಿಆರ್‌) ಶೇ 100ರಷ್ಟು ಇರಬೇಕು. ಭಾರತೀಯ ಬ್ಯಾಂಕ್‌ಗಳ ಎಲ್‌ಸಿಆರ್‌ ಪ್ರಮಾಣವು ಶೇ 130ಕ್ಕಿಂತಲೂ ಹೆಚ್ಚಿದೆ ಎಂದು ಸಚಿವ ಪಂಕಜ್‌ ಚೌಧರಿ ತಿಳಿಸಿದ್ದಾರೆ.

2017–18ರಲ್ಲಿ ಷೆಡ್ಯೂಲ್ಡ್‌ ವಾಣಿಜ್ಯ ಬ್ಯಾಂಕ್‌ಗಳು ₹32437 ಕೋಟಿ ನಷ್ಟ ಅನುಭವಿಸಿದ್ದವು. ಆದರೆ 2023–24ರಲ್ಲಿ ₹3.41 ಲಕ್ಷ ಕೋಟಿ ನಿವ್ವಳ ಲಾಭ ಗಳಿಸಿವೆ ಎಂದು ವಿವರಿಸಿದ್ದಾರೆ.  2018ರ ಮಾರ್ಚ್‌ ಅಂತ್ಯಕ್ಕೆ ವಾಣಿಜ್ಯ ಬ್ಯಾಂಕ್‌ಗಳ ಬಂಡವಾಳ ಪರ್ಯಾಪ್ತತಾ ಅನುಪಾತವು (ಸಿಆರ್‌ಎಆರ್‌) ಶೇ 13.85ರಷ್ಟಿತ್ತು. ಪ್ರಸಕ್ತ ವರ್ಷದ ಮಾರ್ಚ್‌ ಅಂತ್ಯಕ್ಕೆ ಶೇ 16.84ರಷ್ಟಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.  

ದೇಶದಲ್ಲಿ ನಕಲಿ ನೋಟಗಳ ಹಾವಳಿ ಇಳಿಕೆಯಾಗಿದೆ. 2023–24ರಲ್ಲಿ 2.22 ಲಕ್ಷ ನಕಲಿ ನೋಟುಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.