ADVERTISEMENT

ಕ್ರಿಪ್ಟೊಕರೆನ್ಸಿ ನಿಷೇಧಕ್ಕೆ ಸಲಹೆ

ಕೇಂದ್ರ ಸರ್ಕಾರಕ್ಕೆ ಅಂತರ್‌ ಸಚಿವಾಲಯದ ಸಮಿತಿ ವರದಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:34 IST
Last Updated 22 ಜುಲೈ 2019, 19:34 IST
ಬಿಟ್‌ ಕಾಯಿನ್‌
ಬಿಟ್‌ ಕಾಯಿನ್‌   

ನವದೆಹಲಿ (ಪಿಟಿಐ): ಖಾಸಗಿ ಡಿಜಿಟಲ್‌ (ಕ್ರಿಪ್ಟೊ) ಕರೆನ್ಸಿಗಳ ಬಳಕೆಯನ್ನು ನಿಷೇಧಿಸಬೇಕು ಎಂದು ಅಂತರ್‌ ಸಚಿವಾಲಯ ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಇಂತಹ ಪರ್ಯಾಯ ಕರೆನ್ಸಿಗಳಿಗೆ ಸಂಬಂಧಿಸಿದಂತೆ ದೇಶದಲ್ಲಿ ಯಾವುದೇ ಬಗೆಯ ಚಟುವಟಿಕೆಗಳನ್ನು ನಡೆಸುವವರಿಗೆ ದಂಡ ವಿಧಿಸಬೇಕು ಎಂದೂ ವರದಿಯು ಸಲಹೆ ನೀಡಿದೆ.

ಇಂತಹ ಕರೆನ್ಸಿಗಳ ಬಳಕೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ನಿರ್ದಿಷ್ಟ ಕ್ರಮಗಳನ್ನು ಸೂಚಿಸಲು ಸರ್ಕಾರ, 2017ರ ನವೆಂಬರ್‌ನಲ್ಲಿ ಸಮಿತಿ ರಚಿಸಿತ್ತು. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸಮಿತಿಯಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ, ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷ ಮತ್ತು ಆರ್‌ಬಿಐನ ಡೆಪ್ಯುಟಿ ಗವರ್ನರ್‌ ಸದಸ್ಯರಾಗಿದ್ದಾರೆ.

ADVERTISEMENT

ಖಾಸಗಿ ಕ್ರಿಪ್ಟೊ ಕರೆನ್ಸಿಗಳ ವಹಿವಾಟಿಗೆ ಸಂಬಂಧಿಸಿದಂತೆ ನಷ್ಟ ಸಾಧ್ಯತೆ, ತೀವ್ರ ಸ್ವರೂಪದ ಬೆಲೆ ಏರಿಳಿತದ ಕಾರಣಕ್ಕೆ ಅವುಗಳನ್ನು ನಿಷೇಧಿಸಬೇಕು ಎಂದು ಸಮಿತಿ ಸಲಹೆ ನೀಡಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಿಟ್‌ಕಾಯಿನ್‌ ಅಲ್ಲದೆ ರಿಪಲ್‌, ಕಾರ್ಡನ್‌ ಸೇರಿದಂತೆ ವಿಶ್ವದಾದ್ಯಂತ ಹಲವಾರು ಕ್ರಿಪ್ಟೊ ಕರೆನ್ಸಿಗಳು ಚಲಾವಣೆಯಲ್ಲಿ ಇವೆ. ಅವುಗಳ ಮಾರುಕಟ್ಟೆ ಮೌಲ್ಯವು ₹ 8.33 ಲಕ್ಷ ಕೋಟಿಗಳಷ್ಟಿದೆ ಎಂದು ಸಮಿತಿ ಅಂದಾಜಿಸಿದೆ.

ಕ್ರಿಪ್ಟೊಕರೆನ್ಸಿ ನಿಷೇಧ ಮತ್ತು ಅಧಿಕೃತ ಡಿಜಿಟಲ್‌ ಕರೆನ್ಸಿ ನಿಯಂತ್ರಣ ಉದ್ದೇಶದ ಕರಡು ಮಸೂದೆ ಸಿದ್ಧಪಡಿಸಲು ಸಮಿತಿ ಸಲಹೆ ನೀಡಿದೆ. ಈ ಕುರಿತು ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಸಂಬಂಧಿಸಿದ ಎಲ್ಲ ಇಲಾಖೆಗಳು ಮತ್ತು ನಿಯಂತ್ರಣ ಪ್ರಾಧಿಕಾರಗಳ ಜತೆ ಚರ್ಚಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬ್ಯಾಂಕ್‌ ಸಾಲಗಳ ಮೇಲೆ ನಿಗಾ ಇರಿಸುವ, ವಂಚನೆ ಪತ್ತೆಹಚ್ಚುವ, ವಿಮೆ ಪರಿಹಾರ ನಿರ್ವಹಣೆ ಸೇರಿದಂತೆ ಹಣಕಾಸು ಸೇವೆಗಳಲ್ಲಿ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್‌ ಟೆಕ್ನಾಲಜಿ (ಡಿಎಲ್‌ಟಿ) ಬಳಕೆಗೆ ತರುವ ಪ್ರಯೋಜನಗಳ ಬಗ್ಗೆಯೂ ಸಮಿತಿ ಸಲಹೆ ನೀಡಿದೆ.

ಕ್ರಿಪ್ಟೊ ಕರೆನ್ಸಿಗಳ ಬಗ್ಗೆ ಮುಕ್ತ ಮನಸ್ಸು ಹೊಂದಿರಬೇಕು. ಅಧಿಕೃತ ಡಿಜಿಟಲ್‌ ಕರೆನ್ಸಿಯನ್ನು ದೇಶದಲ್ಲಿ ಬಳಕೆಗೆ ತರುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದೂ ಸಮಿತಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.