ಹುಬ್ಬಳ್ಳಿ: ‘ಈ ಮೊದಲು ಬ್ಯಾಂಕುಗಳಲ್ಲಿ ಕೆಲಸ ಮಾಡುವುದು ಆರಾಮದಾಯಕ ಎನ್ನುವ ಮಾತಿತ್ತು. ಈಗ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಏರ್ಪಟ್ಟಿದ್ದರಿಂದ ಬ್ಯಾಂಕುಗಳಲ್ಲೂ ಒತ್ತಡ ಅಧಿಕವಾಗಿದೆ. ಇಂಥ ಒತ್ತಡದಿಂದ ಹೊರಬರಲು ಬ್ಯಾಂಕ್ ಅಧಿಕಾರಿಗಳು ನಿರ್ಮಿಸಿಕೊಂಡಿರುವ ಬ್ಯಾಂಕರ್ಸ್ ಕ್ಲಬ್, ನೆಮ್ಮದಿಯ ತಾಣವಾಗಲಿ‘ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದರು.
ನಗರದ ಅಕ್ಷಯ ಕಾಲೋನಿ ಟೆಂಡರ್‌ಶ್ಯುರ್ ಮಾರ್ಗದಲ್ಲಿ ಹುಬ್ಬಳ್ಳಿ ಬ್ಯಾಂಕರ್ಸ್ ಕ್ಲಬ್‌ನಿಂದ ನೂತನವಾಗಿ ನಿರ್ಮಿಸಿದ ಬ್ಯಾಂಕರ್ಸ್ ಭವನವನ್ನು ಅಕ್ಷಯ ಪಾತ್ರೆಗೆ ನಾಣ್ಯಗಳನ್ನು ಸುರಿಯುವ ಮೂಲಕ ಭಾನುವಾರ ಉದ್ಘಾಟಿಸಿ ಮಾತನಾಡಿದರು.
‘ಪ್ರತಿ ರಂಗದಲ್ಲೂ ಸಂಘಟಿತರಾಗುವುದು ಅನಿವಾರ್ಯ. ಸಂಘಟನೆಗಳ ಮೂಲಕ ಏನಾದರೂ ಸಾಧಿಸಲು ಸಾಧ್ಯ. ಆಧುನಿಕ ಬದುಕಿನಲ್ಲಿ ಮಗುವಿನಿಂದ ಹಿಡಿದು ಹಿರಿಯ ವಯಸ್ಸಿನವರೆಲ್ಲ ಒತ್ತಡದಲ್ಲೆ ಇದ್ದಾರೆ. ಒತ್ತಡದಿಂದ ಹೊರಬರಲು ಬ್ಯಾಂಕ್ ಅಧಿಕಾರಿಗಳು ಕುಟುಂಬಸಮೇತ ಒಂದು ಕಡೆಗೆ ಸೇರಿಕೊಂಡು ಹರಟೆ, ಮಾತುಕತೆ, ಚಹಾಪಾನ ನೆಪದಲ್ಲಿ ಒತ್ತಡ ನಿವಾರಣೆ ಮಾಡಿಕೊಳ್ಳಲು ಸಾಧ್ಯ‘ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಒಳ್ಳೆಯದನ್ನು ಮಾಡುವುದಕ್ಕಾಗಿ ಬ್ಯಾಂಕಿಂಗ್ ಉದ್ಯೋಗ ಒಂದು ಅವಕಾಶ. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ತರಬೇತಿಗಾಗಿ ನಿರ್ಮಿಸಿಕೊಂಡ ಈ ಕ್ಲಬ್‌ನ ಮುಂದಿನ ಯೋಜನೆಗೆ ಸ್ಥಳೀಯ ಶಾಸಕರ ನಿಧಿಯಿಂದ ₹10 ಲಕ್ಷ ನೆರವು ನೀಡಲಾಗುವುದು ಎಂದು ಘೋಷಿಸಿದರು.
ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, 2006 ರವರೆಗೂ ದೇಶದಲ್ಲಿ ಬ್ಯಾಂಕುಗಳು ಒಟ್ಟು 139 ಶತಕೋಟಿ ಡಾಲರ್ ಸಾಲ ನೀಡಿದ್ದವು. 2014ರ ನಂತರ ಮೊಬೈಲ್ ಬ್ಯಾಂಕಿಂಗ್ ಆರಂಭವಾದ ಬಳಿಕ ಎಂಟು ವರ್ಷಗಳಲ್ಲಿ 307 ಶತಕೋಟಿ ಡಾಲರ್ ಸಾಲ ನೀಡಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರದೇ ಇದ್ದಿದ್ದರೆ ಬ್ಯಾಂಕ್ ಸಾಲ ಮುಳುಗಿಸಿ ಓಡಿಹೋದವರು ಇಲ್ಲೇ ಇರುತ್ತಿದ್ದರು. ಸರ್ಕಾರದ ಜೊತೆ ಅವರೆಲ್ಲ ಹೊಂದಾಣಿಕೆ ಮಾಡಿಕೊಂಡು ಬ್ಯಾಂಕುಗಳನ್ನು ಮುಳುಗಿಸಿದ್ದರು‘ ಎಂದರು.
‘ಬ್ಯಾಂಕುಗಳ ದಿವಾಳಿ ತಡೆಗಟ್ಟುವ ಕಾಯ್ದೆ ತ್ವರಿತವಾಗಿ ಜಾರಿಗೊಳಿಸಿದ್ದರ ಪರಿಣಾಮ ಭಾರಿ ಪ್ರಮಾಣದಲ್ಲಿ ಸಾಲ ಎತ್ತಿದವರು ಓಡಿಹೋಗಿದ್ದಾರೆ. ಪ್ರಪಂಚದ ಯಾವುದೇ ದೇಶಕ್ಕೆ ಹೋಲಿಸಿದರೆ ಭಾರತದ ಆರ್ಥಿಕ ಸ್ಥಿತಿ ಈಗ ಉತ್ತಮವಾಗಿದೆ. ಶೇ 27 ರವರೆಗೂ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳು ನಿವ್ವಳ ಆದಾಯ ದಾಖಲಿಸುತ್ತಿವೆ. ಅಮೆರಿಕದಲ್ಲಿ ಸಾಕಷ್ಟು ಬ್ಯಾಂಕುಗಳು ದಿವಾಳಿ ಎದ್ದರೂ ಭಾರತದ ಬ್ಯಾಂಕುಗಳ ಸ್ಥಿತಿ ವಿಭಿನ್ನವಾಗಿದೆ‘ ಎಂದು ತಿಳಿಸಿದರು.
‘ವಿದೇಶಗಳಲ್ಲಿ ಭಾರತೀಯರನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ವಿವಿಧ ಕ್ಷೇತ್ರದಲ್ಲಿ ಭಾರತದ ಬೇಡಿಕೆ ಏರುಗತಿಯಲ್ಲಿದೆ. ಅದೇರೀತಿ ಪ್ರಪಂಚದ ಬೇಡಿಕೆಗಳನ್ನು ಭಾರತವೇ ಪೂರೈಸಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗಿದೆ. 2014ರ ಪೂರ್ವ ಭಾರತದಲ್ಲಿ ಶೇ 92 ರಷ್ಟು ಮೊಬೈಲ್ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಶೇ 92 ರಷ್ಟು ಬಿಡಿಭಾಗಗಳು ಭಾರತದಿಂದ ಬೇರೆ ದೇಶಗಳಿಗೆ ರಫ್ತಾಗುತ್ತಿವೆ. ಈ ಮೊದಲು ಮೊಬೈಲ್ ತಯಾರಿಸುವ ಎರಡು ಕಂಪೆನಿಗಳು ಮಾತ್ರ ಇದ್ದವು. ಈಗ 108 ಮೊಬೈಲ್ ಕಂಪೆನಿಗಳು ಭಾರತದಲ್ಲಿವೆ. ದೇಶದಲ್ಲಿ ಸರಕು ಸಾಗಣೆ ವೆಚ್ಚ ಶೇ 12 ರಷ್ಟಿತ್ತು. ಅದನ್ನು ಕಡಿಮೆ ಮಾಡುವುದಕ್ಕಾಗಿ ರಸ್ತೆ, ವಾಯು ಹಾಗೂ ಜಲ ಸಂಪರ್ಕದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ‘ ಎಂದು ಹೇಳಿದರು.
‘ವಿತ್ತ ಚೇತನ‘ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಹುಬ್ಬಳ್ಳಿ ಬ್ಯಾಂಕರ್ಸ್ ಕ್ಲಬ್ ಉಪಾಧ್ಯಕ್ಷ ರಮೇಶ ಪರ್ವತೀಕರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಹುಬ್ಬಳ್ಳಿ ಕೆನರಾ ಬ್ಯಾಂಕ್ ವೃತ್ತದ ವೃತ್ತ ಮುಖ್ಯಸ್ಥ ಎಂ.ವಿಜಯಕುಮಾರ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಜಗದೀಶ ಮಠದ, ಆರ್.ಸತೀಶ್, ಉದ್ಯಮಿ ಸುರೇಶ ಶೇಜವಾಡಕರ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಹುಬ್ಬಳ್ಳಿ ಬ್ಯಾಂಕರ್ಸ್ ಕ್ಲಬ್ ಅಧ್ಯಕ್ಷ ಡಾ.ಡಿ.ಜಿ.ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಲಬ್ ಪದಾಧಿಕಾರಿಗಳು ಇದ್ದರು.
ಉದ್ಘಾಟನೆ ಬಳಿಕ ವಿವಿಧ ಮನೋರಂಜನೆ ಕಾರ್ಯಕ್ರಮಗಳು ಜರುಗಿದವು.
Quote - ರಚನಾತ್ಮಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ಧೇಯೋದ್ದೇಶದಿಂದ ಬ್ಯಾಂಕರ್ಸ್ ಭವನ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಬ್ಯಾಂಕಿಂಗ್ ತರಬೇತಿ ಕೂಡ ಮಾಡಲಾಗುವುದು.ರಮೇಶ ಪರ್ವತೀಕರ ಬ್ಯಾಂಕರ್ಸ್ ಕ್ಲಬ್ ಹುಬ್ಬಳ್ಳಿ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.