ADVERTISEMENT

ಎಂಎಸ್‌ಎಂಇ ಕ್ಷೇತ್ರದಲ್ಲಿ ‘ಆರ್ ಆ್ಯಂಡ್‌ ಡಿ’ ಅಗತ್ಯ: ಸಂಜೀವ್‌ ಕುಮಾರ್‌ ಗುಪ್ತಾ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 15:38 IST
Last Updated 26 ಸೆಪ್ಟೆಂಬರ್ 2024, 15:38 IST
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ದಿ ಬೆಂಗಳೂರು ಚೇಂಬರ್ ಆಫ್‌ ಇಂಡಸ್ಟ್ರಿ ಆ್ಯಂಡ್‌ ಕಾಮರ್ಸ್‌ನ (ಬಿಸಿಐಸಿ) ನಾಯಕತ್ವ ಶೃಂಗಸಭೆ –2024 ನಡೆಯಿತು
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ದಿ ಬೆಂಗಳೂರು ಚೇಂಬರ್ ಆಫ್‌ ಇಂಡಸ್ಟ್ರಿ ಆ್ಯಂಡ್‌ ಕಾಮರ್ಸ್‌ನ (ಬಿಸಿಐಸಿ) ನಾಯಕತ್ವ ಶೃಂಗಸಭೆ –2024 ನಡೆಯಿತು   

ಬೆಂಗಳೂರು: ಅಮೆಜಾನ್‌, ಆ್ಯಪಲ್‌ನಂತಹ ಜಾಗತಿಕ ಕಂಪನಿಗಳು ಸಂಶೋಧನೆ ಮತ್ತು ಅಭಿವೃದ್ಧಿಗೆ (ಆರ್ ಆ್ಯಂಡ್‌ ಡಿ) ವಾರ್ಷಿಕವಾಗಿ ಲಕ್ಷಾಂತರ ಕೋಟಿ ರೂಪಾಯಿ ಖರ್ಚು ಮಾಡುತ್ತಿವೆ. ಅದೇ ರೀತಿ ದೇಶದಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಅಭಿವೃದ್ಧಿ ಮತ್ತು ಸಂಶೋಧನೆಗೂ ವ್ಯಯಿಸಬೇಕಿದೆ. ಇದಕ್ಕೆ ಬಿಸಿಐಸಿ, ಉದ್ಯಮಿಗಳು, ಬಂಡವಾಳಗಾರರು ಮುಂದಾಗಬೇಕಿದೆ ಎಂದು ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌ನ ಸಿಇಒ ಸಂಜೀವ್‌ ಕುಮಾರ್‌ ಗುಪ್ತಾ ಕರೆ ನೀಡಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಿ ಬೆಂಗಳೂರು ಚೇಂಬರ್ ಆಫ್‌ ಇಂಡಸ್ಟ್ರಿ ಆ್ಯಂಡ್‌ ಕಾಮರ್ಸ್‌ (ಬಿಸಿಐಸಿ) ವಾರ್ಷಿಕ ನಾಯಕತ್ವ ಶೃಂಗಸಭೆ–2024ರಲ್ಲಿ ಮಾತನಾಡಿದರು.

ಸ್ಟಾರ್ಟ್‌‍ಅಪ್‌ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕೃತಕ ಬುದ್ಧಿಮತ್ತೆ ಮತ್ತು ಮಷಿನ್‌ ಲರ್ನಿಂಗ್‌, ಕ್ಲೌಡ್‌ ಕಂಪ್ಯೂಟಿಂಗ್‌, ಕ್ವಾಂಟಂ ಕಂಪ್ಯೂಟಿಂಗ್‌ ಪ್ರಮುಖ ಕ್ಷೇತ್ರಗಳಾಗಿ ಬೆಳೆಯುತ್ತಿವೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮಷಿನ್‌ ಲರ್ನಿಂಗ್‌ ವಹಿವಾಟು ಜಾಗತಿಕವಾಗಿ 3 ಟ್ರಿಲಿಯನ್ ಡಾಲರ್‌ಗೆ (₹250 ಲಕ್ಷ ಕೋಟಿ) ಮುಟ್ಟಲಿದೆ ಎಂದು ಹೇಳಿದರು.

ADVERTISEMENT

ನಾಸ್ಕಾಂ ಪ್ರಕಾರ, ಕರ್ನಾಟಕದಲ್ಲಿ ಎ.ಐ ನವೋದ್ಯಮಗಳ ಸಂಖ್ಯೆ ಹೆಚ್ಚಿದೆ. ದೇಶದ ಮೊದಲ ಯೂನಿಕಾರ್ನ್‌, ಐವತ್ತನೇ ಯೂನಿಕಾರ್ನ್‌, ನೂರನೇ ಯೂನಿಕಾರ್ನ್‌, ತ್ವರಿತ ಯೂನಿಕಾರ್ನ್‌ ಮತ್ತು ಇತ್ತೀಚಿನ ಯೂನಿಕಾರ್ನ್‌ಗಳ ಪಟ್ಟಿಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ ಎಂದರು.

ಕೋರಮಂಗಲ ಮತ್ತು ಎಚ್ಎಸ್‌ಆರ್‌ ಲೇಔಟ್‌ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಇರುವ ನವೋದ್ಯಮಗಳ ಮೌಲ್ಯ 200 ಬಿಲಿಯನ್ ಡಾಲರ್‌ಗೂ (₹16 ಲಕ್ಷ ಕೋಟಿ) ಅಧಿಕವಿದೆ ಎಂದರು. 

ಇಂದು ಹೊರಹೊಮ್ಮುತ್ತಿರುವ ನಾಯಕರು ಮೈಸೂರು, ಮಂಗಳೂರು, ತುಮಕೂರು, ಬೆಳಗಾವಿ, ಶಿವಮೊಗ್ಗ ಮತ್ತು ಕಲಬುರಗಿಯಂತಹ 2ನೇ ಹಂತದ ನಗರಗಳಿಂದ ಬಂದವರಾಗಿದ್ದಾರೆ. ಈ ನಗರಗಳಿಂದಲೇ ಸುಮಾರು 200ಕ್ಕೂ ಅಧಿಕ ನವೋದ್ಯಮಗಳು ಹೊರಹೊಮ್ಮಿವೆ. ಇವುಗಳಿಗೆ ಮಾರುಕಟ್ಟೆ ಸೃಷ್ಟಿಸಬೇಕಿದೆ. ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ದೊಡ್ಡ ಕಂಪನಿಗಳು ನವೋದ್ಯಮಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಹೇಳಿದರು. 

‘ಕೋವಿಡ್ ವೇಳೆಯು ಡಿಜಿಟಲ್‌ ಯುಗವನ್ನು ಆರಂಭಿಸಿತು. ಉದ್ಯಮವನ್ನು ಯ ಯಶಸ್ವಿಯಾಗಿಸಲು ಉದ್ಯಮದಾರನು ತನ್ನ ಸಾಮರ್ಥ್ಯ ತಿಳಿದುಕೊಳ್ಳಬೇಕು. ಕ್ಷಿಪ್ರ ಬದಲಾವಣೆಗೆ ಸಿದ್ಧವಾಗಿರಬೇಕು. ಆಧ್ಯಾತ್ಮಿಕತೆ, ವಿಶ್ವಾಸ, ಸ್ಥಿರತೆ ಬೆಳೆಸಿಕೊಳ್ಳಬೇಕು’ ಎಂದು ಪೋರ್ಟಿಯಾ ಮೆಡಿಕಲ್‌ನ ಸಹ–ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಮೀನಾ ಗಣೇಶನ್‌ ಹೇಳಿದರು.

ಬಯೊಕಾನ್ ಲಿಮಿಟೆಡ್‌ನ ಕಾರ್ಪೊರೇಟ್ ಗ್ರೂಪ್ ಸಿಇಒ ಪೀಟರ್ ಬೇನ್ಸ್ ಮಾತನಾಡಿ, ಜಾಗತಿಕ ಜೈವಿಕ ತಂತ್ರಜ್ಞಾನ ಕ್ಷೇತ್ರ ಪ್ರಸ್ತುತ 1.4 ಟ್ರಿಲಿಯನ್ ಡಾಲರ್ (₹117 ಲಕ್ಷ ಕೋಟಿ) ಮೌಲ್ಯ ಇದೆ ಎಂದು ಅಂದಾಜು ಮಾಡಲಾಗಿದೆ. ಇದು 2028ರ ಹೊತ್ತಿಗೆ 2.4 ಟ್ರಿಲಿಯನ್‌ ಡಾಲರ್‌ಗೆ (₹200 ಲಕ್ಷ ಕೋಟಿ) ಬೆಳೆಯುವ ನಿರೀಕ್ಷೆ ಇದ್ದು, ವಾರ್ಷಿಕ ಬೆಳವಣಿಗೆ ಸರಾಸರಿ ಶೇ 5ರಿಂದ ಶೇ 6ರಷ್ಟಿದೆ ಎಂದರು.

ಬಿಸಿಐಸಿ ಅಧ್ಯಕ್ಷ ವಿನೀತ್ ವರ್ಮಾ ಮಾತನಾಡಿ, ಉದ್ಯಮ ಕ್ಷೇತ್ರದ ನಾಯಕರಿಗೆ ಬಿಸಿಐಸಿಯ ಈ ಶೃಂಗಸಭೆಯು ವೇದಿಕೆ ಪೂರೈಸಿದ್ದು, ಪರಸ್ಪರ ಸಂಪರ್ಕಿಸಲು, ಕಲಿತುಕೊಳ್ಳಲು ಮತ್ತು ಸ್ಫೂರ್ತಿಯಾಗಲು ಅವಕಾಶ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೈರಾಜ್‌ ಕೆ., ಬಿಸಿಐಸಿ ಲೀಡರ್‌ಶಿಪ್ ಫೋರಂನ ಸಂಚಾಲಕರಾದ ಡಾ.ಎಲ್. ರವೀಂದ್ರನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.