ಬೆಂಗಳೂರು: ‘ಬೆಂಗಳೂರಿನಲ್ಲಿಯೇ ನವೋದ್ಯಮಗಳು ತಳವೂರಿವೆ. ಆದರೆ, ಜಿಲ್ಲಾ ಕೇಂದ್ರಗಳಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಕಚೇರಿಯೇ ಇಲ್ಲ. ನವೋದ್ಯಮ ಸ್ಥಾಪನೆ ಕುರಿತ ಮಾಹಿತಿ ಅರಿಯಲು ನಾವು ಬೀದರ್, ಕಲಬುರಗಿಯಿಂದ ಬೆಂಗಳೂರಿಗೆ ಬರಬೇಕಿದೆ...’
ನಗರದಲ್ಲಿ ಗುರುವಾರ ನಡೆದ ಬೆಂಗಳೂರು ಟೆಕ್ ಶೃಂಗದಲ್ಲಿ ‘ಭವಿಷ್ಯದಲ್ಲಿ ನವೋದ್ಯಮ ಕ್ಲಸ್ಟರ್‌ಗಳ ಸ್ಥಿತಿಗತಿ’ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಲ್ಯಾಣ ಕರ್ನಾಟಕದ ಪ್ರತಿನಿಧಿಗಳು, ರಾಜ್ಯ ಸರ್ಕಾರದ ಮುಂದೆ ಅಳಲು ತೋಡಿಕೊಂಡ ಪರಿ ಇದು.
ನವೋದ್ಯಮ ವ್ಯವಸ್ಥೆಗೆ ಸಂಬಂಧಿಸಿದಂತೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ಒಗ್ಗೂಡಿ ಕೆಲಸ ನಿರ್ವಹಿಸಬೇಕಿದೆ. ಇದರಿಂದ ನವೋದ್ಯಮಿಗಳಿಗೆ ಆರ್ಥಿಕ ನೆರವು ಸೇರಿ ಇತರೆ ಸವಲತ್ತು ಸಿಗಲು ನೆರವಾಗಲಿದೆ. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಪ್ರೋತ್ಸಾಹಕ್ಕಾಗಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ನವೋದ್ಯಮದ ಬಗ್ಗೆ ಮಾಹಿತಿ ನೀಡುವ ಕೇಂದ್ರ ತೆರೆಯಬೇಕು ಎಂದು ಬೇಡಿಕೆ ಇಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಎಲೆಕ್ಟ್ರಾನಿಕ್ಸ್, ಐ.ಟಿ ಮತ್ತು ಬಿ.ಟಿ ಇಲಾಖೆಯ ಉಪ ಕಾರ್ಯದರ್ಶಿ ರುಚಿ ಬಿಂದಾಲ್, ‘ಈಗಾಗಲೇ, ಮೈಸೂರಿನಲ್ಲಿ ನವೋದ್ಯಮಕ್ಕೆ ಪ್ರೋತ್ಸಾಹ ನೀಡುವುದಕ್ಕೆ ಸಂಬಂಧಿಸಿದ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಎಲ್ಲಾ ಜಿಲ್ಲೆಗಳಿಗೂ ಈ ಸೇವೆಯ ವಿಸ್ತರಣೆಗೆ ಸರ್ಕಾರ ಕ್ರಮವಹಿಸಿದೆ’ ಎಂದು ತಿಳಿಸಿದರು.
ಜಿಲ್ಲಾಮಟ್ಟದಲ್ಲಿಯೂ ಐ.ಟಿ, ಬಿ.ಟಿ ಕಚೇರಿ ತೆರೆಯಲಾಗುವುದು ಎಂದರು.
ಕೇರಳ ಕಾಲೇಜುಗಳಲ್ಲಿ ಐಇಡಿಸಿ ಸ್ಥಾಪನೆ:
ಕೇರಳದ ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ ಇಲಾಖೆಯ ಕಾರ್ಯದರ್ಶಿ ಡಾ.ರತನ್ ಕೇಲ್ಕರ್ ಮಾತನಾಡಿ, ‘ಕೇರಳದಲ್ಲಿ ವಿದ್ಯಾರ್ಥಿಗಳ ಹೊಸ ಆಲೋಚನೆಗೆ ನೀರೆರೆಯಲು ನಾವೀನ್ಯ ಮತ್ತು ವಾಣಿಜ್ಯೋದ್ಯಮ ಅಭಿವೃದ್ಧಿ ಕೇಂದ್ರಗಳನ್ನು (ಐಇಡಿಸಿ) ತೆರೆಯಲಾಗಿದೆ. ಈ ಕೇಂದ್ರಗಳು ವಿದ್ಯಾರ್ಥಿಗಳ ಉದ್ಯಮಶೀಲತೆಯ ಪ್ರಯಾಣಕ್ಕೆ ಉಡ್ಡಯನ ಪ್ಯಾಡ್‌ಗಳಂತೆ ಕಾರ್ಯನಿರ್ವಹಿಸುತ್ತವೆ’ ಎಂದು ಮಾಹಿತಿ ನೀಡಿದರು.
ಕೇರಳದ ನವೋದ್ಯಮ ಮಿಷನ್‌ನಡಿ ರಾಜ್ಯದಾದ್ಯಂತ ಎಂಜಿನಿಯರಿಂಗ್ ಕಾಲೇಜು, ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ವೈದ್ಯಕೀಯ ಕಾಲೇಜು, ಪಾಲಿಟೆಕ್ನಿಕ್ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಾಗಿದೆ. ವಿದ್ಯಾರ್ಥಿಗಳ ಪ್ರಯೋಗ ಮತ್ತು ಆವಿಷ್ಕಾರಕ್ಕೆ ಇವು ವೇದಿಕೆಗಳಾಗಿವೆ ಎಂದರು.
ತೆಲಂಗಾಣದ ಐ.ಟಿ, ಎಲೆಕ್ಟ್ರಾನಿಕ್ ಹಾಗೂ ಸಂವಹನ ಸಚಿವಾಲಯದ ಮುಖ್ಯ ಕಾರ್ಯತಂತ್ರ ಅಧಿಕಾರಿ ಶ್ರೀಕಾಂತ್ ಲಂಕಾ ಮಾತನಾಡಿ, ‘ತೆಲಂಗಾಣ ಸರ್ಕಾರವು ನವೋದ್ಯಮ ಚಟುವಟಿಕೆಗಳಿಗೆ ಪೂರಕ ವಾತಾವರಣ ಸೃಷ್ಟಿಸಿದೆ. ನವೋದ್ಯಮಗಳು ಆರಂಭದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು (ಇನ್‍ಕ್ಯುಬೇಟರ್ ಹಂತ) ಆರ್ಥಿಕ ನೆರವಿನ ಕೊರತೆ ಎದುರಿಸುತ್ತವೆ. ಅಂತಹ ನವೋದ್ಯಮಗಳಿಗೆ ನೆರವು ನೀಡಲಾಗುತ್ತಿದೆ’ ಎಂದು ತಿಳಿಸಿದರು.
ಎಂಜಿನಿಯರಿಂಗ್ ವಿದ್ಯಾರ್ಥಿಗಳು ದೇಶ–ವಿದೇಶಗಳ ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆದುಕೊಳ್ಳಲು ಸರ್ಕಾರ ಉತ್ತಮ ವೇದಿಕೆ ಕಲ್ಪಿಸಿದೆ. ಯಾವ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳಿವೆ ಎಂಬುದರ ಕುರಿತೂ ಸ್ಪಷ್ಟತೆ ಸಿಕ್ಕಿದೆಮೈತ್ರಾ ಕೆ., ಎಂಜಿನಿಯರಿಂಗ್ ವಿದ್ಯಾರ್ಥಿನಿ ಎಲೆಕ್ಟ್ರಾನಿಕ್ ಸಿಟಿ
ಬೆಂಗಳೂರು ಟೆಕ್ ಶೃಂಗದಲ್ಲಿ ಮಾಹಿತಿಯ ಜೊತೆಗೆ ಐಟಿ, ಬಯೋಟೆಕ್ ಕ್ಷೇತ್ರದಲ್ಲಿರುವ ಉದ್ಯೋಗ ಅವಕಾಶಗಳ ಕುರಿತು ನಮ್ಮಂತಹ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಳ್ಳಲು ಅವಕಾಶ ಇದೆ. ಸರ್ಕಾರ ವಾರ್ಷಿಕ 10 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಒಪ್ಪಂದ ಮಾಡಿಕೊಂಡಿರುವುದು ಶ್ಲಾಘನೀಯಮೆಲಿಶಾ ಕೆ. ಸನ್ನಿ, ಎಂಜಿನಿಯರಿಂಗ್ ವಿದ್ಯಾರ್ಥಿನಿ
ಕೃತಕ ಬುದ್ದಿಮತ್ತೆ (ಎಐ) ಆಧಾರಿತ ತಂತ್ರಜ್ಞಾನವನ್ನು ಯಾವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳಿವೆಯೇ? ಎಂಬ ನಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡಿದ್ದೇವೆಶಶಾಂಕ್, ಎಂಜಿನಿಯರಿಂಗ್ ವಿದ್ಯಾರ್ಥಿ ಬಿಎಂಎಸ್‌ಐಟಿ ಕಾಲೇಜು
ನಾನು ಎರಡು ವರ್ಷಗಳಿಂದ ಈ ಶೃಂಗಕ್ಕೆ ಬರುತ್ತಿದ್ದೇನೆ. ನನಗೆ ಏನೂ ಗೊತ್ತಿಲ್ಲವೆಂದು ಒಳಗಡೆ ಬಂದರೆ, ಇಲ್ಲಿಂದ ಜ್ಞಾನದ ಭಂಡಾರವನ್ನು ಹೊತ್ತುಕೊಂಡು ಹೊರಹೋಗಬಹುದು. ನಮ್ಮಂತಹ ವಿದ್ಯಾರ್ಥಿಗಳ ಕಲಿಕೆ ಮತ್ತು ಬೆಳವಣಿಗೆಗೆ ಇದು ಸಹಕಾರಿ.ಪ್ರಥಮ್, ಎಂಜಿನಿಯರಿಂಗ್ ವಿದ್ಯಾರ್ಥಿ, ಶಿವಮೊಗ್ಗ
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳು ಈ ಶೃಂಗದಲ್ಲಿ ಪಾಲ್ಗೊಂಡಿವೆ. ಈ ಕಂಪನಿಗಳ ಮುಖ್ಯಸ್ಥರೊಂದಿಗೆ ಸಂವಾದ ನಡೆಸುವ ಅವಕಾಶ ನಮಗೆ ಸಿಕ್ಕಿದ್ದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಯಾವ ಕೌಶಲಗಳನ್ನು ಬೆಳೆಸಿಕೊಳ್ಳಬೇಕೆಂಬ ಮಾಹಿತಿ ಲಭಿಸಿದೆನಿಶಿತಾ, ವಿದ್ಯಾರ್ಥಿನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.