ಬೆಂಗಳೂರು: ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿರುವ ‘ದೂರಸಂಪರ್ಕ ಮಸೂದೆ–2023’ ರಾಷ್ಟ್ರದ ಪ್ರಗತಿದಾಯಕ ಮುನ್ನೋಟ ಹೊಂದಿದೆ ಎಂದು ಭಾರ್ತಿ ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಗೋಪಾಲ್ ವಿಠ್ಠಲ್ ಹೇಳಿದ್ದಾರೆ.
ದೂರಸಂಪರ್ಕ ಕಂಪನಿಗಳಿಗೆ ಸರ್ಕಾರದ ಪರವಾನಗಿ, ನೋಂದಣಿ ಹಾಗೂ ಅನುಮತಿ ನೀಡುವ ವ್ಯವಸ್ಥೆಯು ಜಟಿಲವಾಗಿತ್ತು. ಮಸೂದೆಯಲ್ಲಿ ಇದನ್ನು ಸರಳೀಕರಿಸಲಾಗಿದೆ. ಇದು ಉದ್ಯಮದ ಅಭ್ಯುದಯಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಉಪಗ್ರಹ ಆಧಾರಿತ ಸೇವೆ ಒದಗಿಸುವ ಖಾಸಗಿ ಕಂಪನಿಗಳಿಗೆ ಸರ್ಕಾರವೇ ನೇರವಾಗಿ ತರಂಗಾಂತರಗಳನ್ನು ನಿಯೋಜಿಸಲು ಮಸೂದೆಯಡಿ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ, ಹರಾಜಿನ ಮೂಲಕ ತರಂಗಾಂತರಗಳನ್ನು ಹಂಚಿಕೆ ಮಾಡಬೇಕಿದ್ದ ನಿಯಮವನ್ನು ಈ ಮಸೂದೆ ತೊಡೆದು ಹಾಕಿದೆ. ಇದು ಡಿಜಿಟಲ್ ವಲಯದ ಮೂಲಸೌಕರ್ಯವನ್ನು ಮತ್ತಷ್ಟು ಸದೃಢಗೊಳಿಸಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರದ ಈ ಸುಧಾರಣೆ ಕ್ರಮವು ದೇಶದಲ್ಲಿ 5ಜಿ ಸೇವೆ ಸೇರಿದಂತೆ ದೂರಸಂಪರ್ಕ ವಲಯದ ಮೂಲಸೌಕರ್ಯದ ವೇಗ ಹೆಚ್ಚಿಸಲು ಸಹಕಾರಿಯಾಗಲಿದೆ. ಸ್ಥಳೀಯ ಮಟ್ಟದಲ್ಲಿಯೂ ದೂರಸಂಪರ್ಕ ಇಲಾಖೆಯ ನಿಯಮಾವಳಿಗಳ ಜಾರಿಗೆ ಅನುಕೂಲವಾಗಲಿದೆ. ಅಲ್ಲದೇ, ಮಸೂದೆಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗೆ ಸಂಬಂಧಿಸಿದಂತೆ ಪ್ರಸ್ತಾಪಿಸಿರುವ ನಿಬಂಧನೆಗಳು ಉದ್ಯಮದ ಪ್ರಗತಿಯ ವೇಗಕ್ಕೆ ಪುಷ್ಟಿ ನೀಡುತ್ತವೆ ಎಂದು ಹೇಳಿದ್ದಾರೆ.
ಮಸೂದೆಯಲ್ಲಿ ನಿಯಮಾವಳಿ ಉಲ್ಲಂಘಿಸುವ ಕಂಪನಿಗಳಿಗೆ ವಿಧಿಸುತ್ತಿದ್ದ ದಂಡಕ್ಕೆ ಸಂಬಂಧಿಸಿದ ಚೌಕಟ್ಟನ್ನೂ ಸರಳೀಕರಿಸಲಾಗಿದೆ. ನಿಯಮ ಉಲ್ಲಂಘನೆಗಳಿಗೆ ಅನುಗುಣವಾಗಿ ದಂಡ ವಿಧಿಸುವ ಶ್ರೇಣಿಕೃತ ವ್ಯವಸ್ಥೆ ರೂಪಿಸಲು ಒತ್ತು ನೀಡಲಾಗಿದೆ. ಸ್ವಯಂಪ್ರೇರಿತವಾಗಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಇದು ವಿವಾದಗಳ ಸಂಖ್ಯೆಯನ್ನು ತಗ್ಗಿಸಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಸುಧಾರಣೆಯ ಪರ್ವಕಾಲ’
ಮಸೂದೆಯು ದೂರಸಂಪರ್ಕ ಕ್ಷೇತ್ರದ ಸುಧಾರಣೆಯ ಪರ್ವಕಾಲಕ್ಕೆ ಸಾಕ್ಷಿಯಾಗಿದೆ ಎಂದು ವೊಡಾಫೋನ್ ಐಡಿಯಾದ ಸಿಇಒ ಅಕ್ಷಯ್ ಮೂಂದ್ರ ಹೇಳಿದ್ದಾರೆ.
ದೂರಸಂಪರ್ಕ ಕ್ಷೇತ್ರಕ್ಕೆ ಭವಿಷ್ಯದ ಚೌಕಟ್ಟು ರೂಪಿಸಲು ಕೇಂದ್ರ ಮುಂದಾಗಿದೆ. ಇದು ನವ ಭಾರತದ ಅಭಿವೃದ್ಧಿಯ ಆಕಾಂಕ್ಷೆ ಈಡೇರಲು ವೇದಿಕೆಯಾಗಲಿದೆ ಎಂದು ಹೇಳಿದ್ದಾರೆ.
ದೇಶದ ಎಲ್ಲಾ ಜನರಿಗೆ ಡಿಜಿಟಲ್ ಸಂಪರ್ಕ ಕಲ್ಪಿಸಲು ನೆರವಾಗಲಿದೆ. ದಂಡ ವಿಧಿಸುವುದನ್ನು ತರ್ಕಬದ್ಧಗೊಳಿಸಬೇಕು ಹಾಗೂ ಸರಿಯಾದ ಮಾರ್ಗದಲ್ಲಿ ಕಾನೂನಿನ ನಿಬಂಧನೆಗಳನ್ನು ಜಾರಿಗೊಳಿಸಬೇಕು ಎಂಬುದು ಉದ್ಯಮದ ಹಲವು ದಿನಗಳ ಬೇಡಿಕೆಯಾಗಿತ್ತು. ಇದನ್ನು ಸರ್ಕಾರ ಪರಿಗಣಿಸಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.