ADVERTISEMENT

‘ಭೀಮಾ ಪಲ್ಸಸ್‌’ ಬ್ರಾಂಡ್‌ಗೆ ಬೇಕಿದೆ ಅನುದಾನ ಬಲ

ನಿರ್ಮಾಣವಾಗದ ಸಂಸ್ಕರಣಾ ಘಟಕ; ಜೋಡಣೆಗಾಗಿ ಕಾದಿವೆ ₹ 2 ಕೋಟಿ ವೆಚ್ಚದ ಯಂತ್ರಗಳು

ಮಲ್ಲಿಕಾರ್ಜುನ ನಾಲವಾರ
Published 29 ಮೇ 2023, 21:03 IST
Last Updated 29 ಮೇ 2023, 21:03 IST
ಭೀಮಾ ಪಲ್ಸಸ್‌ ತೊಗರ ಬೇಳೆ ಪ್ಯಾಕೇಟ್‌ ಮಾದರಿ
ಭೀಮಾ ಪಲ್ಸಸ್‌ ತೊಗರ ಬೇಳೆ ಪ್ಯಾಕೇಟ್‌ ಮಾದರಿ   

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಬೆಳೆಯುವ ವಿಶಿಷ್ಟವಾದ ಭೌಗೋಳಿಕ ಸೂಚಕ (ಜಿಐ ಟ್ಯಾಗ್‌) ಹೊಂದಿದ ತೊಗರಿ ಬೇಳೆಯನ್ನು ಭೀಮಾ ಪಲ್ಸಸ್‌ ಬ್ರ್ಯಾಂಡ್ ಅಡಿ ಮಾರಲು ಸರ್ಕಾರ ನಿರ್ಧರಿಸಿತ್ತು.

ಕೋಟನೂರ (ಡಿ) ಬಳಿಯಲ್ಲಿ ಜಿಲ್ಲಾ ಕೃಷಿ ಇಲಾಖೆ ನೀಡಿದ ಜಾಗದಲ್ಲಿ ತೊಗರಿ ಬೇಳೆ ಸಂಸ್ಕರಣಾ ಘಟಕಕ್ಕೆ ಚಾಲನೆ ನೀಡಿತ್ತು. ಆದರೆ, ಸಕಾಲಕ್ಕೆ ಬಾರದ ಅನುದಾನ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಉದ್ದೇಶತ ಯೋಜನೆಗೆ ಹಿನ್ನಡೆಯಾಗಿದೆ. ಭೀಮಾ ಪಲ್ಸಸ್‌ ಬ್ರ್ಯಾಂಡ್‌ ಬಿಡುಗಡೆಯಾಗಿ ತಿಂಗಳುಗಳೇ ಉರುಳಿದರೂ ಮಾರುಕಟ್ಟೆಗೆ ಬಂದಿಲ್ಲ.

₹ 8 ಕೋಟಿ ವೆಚ್ಚದಲ್ಲಿ ತೊಗರಿ ಬೇಳೆ ಸಂಸ್ಕರಣಾ ಘಟಕ ನಿರ್ಮಿಸಲು ಉದ್ದೇಶಿಸಲಾಗಿದ್ದು, ರೈತರ ತರಬೇತಿ ಕೇಂದ್ರ ಕಟ್ಟಡದ ಕಾಮಗಾರಿ ಮುಗಿದಿದೆ. ಬೇಳೆ ಸಂಸ್ಕರಣೆಗೆ ಬೇಕಾದ
₹ 2 ಕೋಟಿ ಮೊತ್ತದ ಯಂತ್ರಗಳು ಸಿದ್ಧವಾಗಿದ್ದು, ಜೋಡಣೆಗಾಗಿ ಕಾಯುತ್ತಿವೆ. ಸಂಸ್ಕರಣಾ ಘಟಕ ಮತ್ತು ಉಗ್ರಾಣ ಕಾಮಗಾರಿ ಉಳಿದಿದೆ. 

ADVERTISEMENT

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷರು ಸಂಸ್ಕರಣಾ ಘಟಕಕ್ಕಾಗಿ ₹ 3 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದ್ದರು. ಲೋಕೋಪಯೋಗಿ ಇಲಾಖೆ ಟೆಂಡರ್ ಕರೆದು, ಟೆಂಡರ್‌ನ ತಾಂತ್ರಿಕ ಪರಿಶೀಲನೆ ಮಾಡುವ ವೇಳೆಗೆ ಚುನಾವಣೆ ನೀತಿ ಸಂಹಿತಿ ಅಡ್ಡಿಯಾಗಿ ಅನುದಾನ ಬಿಡುಗಡೆ ಆಗಲಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ಅವಧಿಯ ಕೊನೆಯಲ್ಲಿ ಮಂಜೂರು ಮಾಡಿದ್ದ ಕಾಮಗಾರಿಗಳು ಹಾಗೂ ಟೆಂಡರ್ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ. ಕೆಕೆಆರ್‌ಡಿಬಿಗೆ ಅಧ್ಯಕ್ಷರೂ ನೇಮಕ ಆಗಿಲ್ಲ. ಹೀಗಾಗಿ, ಸಂಸ್ಕರಣ ಘಟಕ ನಿರ್ಮಾಣಕ್ಕೆ ಅಡ್ಡಿಯಾಗಿದೆ.

ಪರ್ಯಾಯ ಮಾರ್ಗ ಏನು?: ಒಂದು ವೇಳೆ ಅನುದಾನ ಬಾರದಿದ್ದರೆ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಮುಂದೆ ಮತ್ತೊಂದು ಸುತ್ತಿನ ಪ್ರಸ್ತಾಪ ಇರಿಸುವ ಚಿಂತನೆ ಅಧಿಕಾರಿಗಳದ್ದು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ ‘ಭೀಮಾ ಪಲ್ಸಸ್‌’ಗೆ ಅನುಮೋದನೆ ಸಿಕ್ಕಿದೆ. ಮಂಡಳಿಯ ಮುಂದೆ ಘಟಕ ನಿರ್ಮಾಣದ ಪ್ರಸ್ತಾಪ ಮಂಡಿಸಿ ಅನುದಾನ ತಂದು ಸಂಸ್ಕರಣಾ ಘಟಕ ಪೂರ್ಣಗೊಳಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಕಲಬುರಗಿಯ ಹೊರವಲಯದ ಕೋಟನೂರ(ಡಿ) ಪ್ರದೇಶದಲ್ಲಿ ನಿರ್ಮಿಸಿರುವ ರೈತರ ತರಬೇತಿ ಕೇಂದ್ರ
ತೊಗರಿ ಬೇಳೆ ಸಂಸ್ಕರಣಾ ಯಂತ್ರಗಳು ಆರು ತಿಂಗಳಿಂದ ಜೋಡಣೆಗಾಗಿ ಕಾಯುತ್ತಿವೆ. ಘಟಕ ನಿರ್ಮಾಣ ಕಾಮಗಾರಿಯು ಶುರುವಾದ 3–4 ತಿಂಗಳಲ್ಲಿ ಮುಗಿಯಲಿದೆ. ಅನುದಾನಕ್ಕಾಗಿ ಕಾಯುತ್ತಿದ್ದೇವೆ.
ಆಂಥೋನಿ ಮಾರಿಯಾ ಇಮ್ಯಾನುಯೆಲ್, ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ
ರೈತ ಸಂಪರ್ಕ ಕೇಂದ್ರ ಎಫ್‌ಪಿಒ ಮೂಲಕ ನೋಂದಣಿ
‘ಜಿಐ ವ್ಯಾಪ್ತಿಯಲ್ಲಿನ ನೋಂದಾಯಿತ ಬೆಳೆಗಾರರಿಂದ ತೊಗರಿ ಖರೀದಿಸುವುದು ಕಡ್ಡಾಯ. ರೈತ ಉತ್ಪಾದಕರ ಸಂಸ್ಥೆಗಳು(ಎಫ್‌ಪಿಒ) ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ಬೆಳೆಗಾರರ ನೋಂದಣಿ ನಡೆಯುತ್ತಿದ್ದು ದೇಶಪಾಂಡೆ ಪ್ರತಿಷ್ಠಾನವೂ ಕೈಜೋಡಿಸಿದೆ’ ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಆಂಥೋನಿ ಮಾರಿಯಾ ಇಮ್ಯಾನುಯೆಲ್ ‘ಪ್ರಜಾವಾಣಿ’ಗೆ ತಿಳಿಸಿದರು. ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸುಮಾರು 34 ರೈತ ಸಂಪರ್ಕ ಕೇಂದ್ರಗಳಿಗೆ ತಲಾ 100 ಅರ್ಜಿಗಳು ನೀಡಲಾಗಿದೆ. 1200ಕ್ಕೂ ಅಧಿಕ ಬೆಳೆಗಾರರು ಅರ್ಜಿ ಸಲ್ಲಿಸಿದ್ದು 135ಕ್ಕೂ ಹೆಚ್ಚು ರೈತರು ನೋಂದಣಿ ಆಗಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.