ನವದೆಹಲಿ: ಅಂಚೆ ಇಲಾಖೆ ಮೂಲಕ ಕಳುಹಿಸಲಾಗುವ ಪಾರ್ಸಲ್‌ಗಳಿಗೆ ಡಿಜಿಟಲ್ ಪಾರ್ಸಲ್ ಲಾಕರ್ ಅಳವಡಿಸುವ ನಿಟ್ಟಿನಲ್ಲಿ ಲಾಜಿಸ್ಟಿಕ್ ಕಂಪನಿ ಬ್ಲೂ ಡಾರ್ಟ್ ಜತೆ ಇಂಡಿಯಾ ಪೋಸ್ಟ್ ಒಡಂಬಡಿಕೆ ಮಾಡಿಕೊಂಡಿದೆ.
ಡಿಜಿಟಲ್ ಪಾರ್ಸಲ್ ಲಾಕರ್‌ಗಳಿಂದ ಸರಕುಗಳನ್ನು ಅಂಚೆ ಇಲಾಖೆ ಮೂಲಕ ಹಿಂಪಡೆಯಲು ಈ ಡಿಜಿಟಲ್ ಸೇವೆ ಬಳಸಿಕೊಳ್ಳಬಹುದಾಗಿದೆ.
‘ಗ್ರಾಹಕರಿಗೆ ಹೆಚ್ಚಿನ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬ್ಲೂ ಡಾರ್ಟ್ ಹಾಗೂ ಇಂಡಿಯಾ ಪೋಸ್ಟ್ ಒಪ್ಪಂದ ಮಾಡಿಕೊಂಡಿದ್ದು, ಇದರ ಮೂಲಕ ಆಯ್ದ ಅಂಚೆ ಕಚೇರಿಗಳಲ್ಲಿ ಸ್ವಯಂಚಾಲಿತ ಡಿಜಿಟಲ್ ಪಾರ್ಸಲ್ ಲಾಕರ್ ಸೌಲಭ್ಯ ಪಡೆಯಬಹುದು. ಇದರಿಂದ ಗ್ರಾಹಕರಿಗೆ ಹೆಚ್ಚುವರಿ ವಿತರಣಾ ವಿಧಾನ ಸೌಲಭ್ಯ ಸಿಗಲಿದೆ’ ಎಂದು ಕಂಪನಿ ಹೇಳಿದೆ.
‘ಈ ಪಾರ್ಸಲ್ ಲಾಕರ್ ಸೌಲಭ್ಯದ ಮೂಲಕ ಮಾಹಿತಿ ಗೋಪ್ಯವಾಗಿರುವುದಲ್ಲದೇ, ಅರ್ಹರಿಗೆ ಸುಲಭವಾಗಿ ಸಿಗುವಂತಿರಲಿದೆ. ಪಾರ್ಸಲ್ ಸ್ವೀಕರಿಸುವವರು ತಮಗೆ ಲಭ್ಯವಾದ ಕೋಡ್ ಬಳಸಿ ತಮ್ಮ ಲಾಕರ್ ತೆರೆದು ಪಾರ್ಸಲ್ ತೆಗೆದುಕೊಳ್ಳಬಹುದು. ತಮಗೆ ಅನುಕೂಲವಾಗುವ ಸಮಯದಲ್ಲಿ ತಮ್ಮ ವಸ್ತುವನ್ನು ಪಡೆಯಲು ಇದರಲ್ಲಿ ಅವಕಾಶವಿದೆ’ ಎಂದು ವಿವರಿಸಿದೆ.
‘ಈ ಹೊಸ ಸೌಕರ್ಯದ ಮೂಲಕ ಲಾಜಿಸ್ಟಿಕ್ ಸಂಪರ್ಕ ಜಾಲವನ್ನು ಇನ್ನಷ್ಟು ವಿಸ್ತರಿಸಬಹುದು. ಜತೆಗೆ ಕಟ್ಟಕಡೆಯ ಗ್ರಾಹಕರನ್ನು ತಲುಪಲು ಸಾಧ್ಯ. ಗ್ರಾಹಕರ ಪಾರ್ಸಲ್‌ಗಳು ಹೆಚ್ಚು ಸುರಕ್ಷಿತವಾಗಿರಲಿವೆ. ಡಿಜಿಟಲ್ ಜಗತ್ತಿನ ಬೇಡಿಕೆಗೆ ಅನುಗುಣವಾಗಿ ಇದನ್ನು ಸಿದ್ಧಪಡಿಸಲಾಗಿದೆ’ ಎಂದು ಬ್ಲೂ ಡಾರ್ಟ್ ವ್ಯವಸ್ಥಾಪಕ ನಿರ್ದೇಶಕ ಬಾಲ್‌ಫೋರ್ ಮಾನ್ಯುಯಲ್ ತಿಳಿಸಿದರು.
ಬ್ಲೂ ಡಾರ್ಟ್ ಎಕ್ಸ್‌ಪ್ರೆಸ್ ಸಂಸ್ಥೆಯು ವಾಯುಯಾನ, ರಸ್ತೆ ಸಾರಿಗೆ ಸೇರಿದಂತೆ ಹಲವು ರೀತಿಯ ಸರಕು ಸಾಗಣೆ ವ್ಯವಸ್ಥೆ ಹೊಂದಿದೆ. ಭಾರತದಲ್ಲಿ 56 ಸಾವಿರ ಸ್ಥಳಗಳಲ್ಲಿ ತನ್ನ ಕಚೇರಿ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.