ADVERTISEMENT

ಎಜಿಎಸ್‌ ಟ್ರಾನ್ಸಾಕ್ಟ್‌ ಟೆಕ್ನಾಲಜೀಸ್‌ನಿಂದ ಮೊಬಿಲಿಟಿ ಕಾರ್ಡ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 14:01 IST
Last Updated 24 ಅಕ್ಟೋಬರ್ 2024, 14:01 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಸಾರ್ವಜನಿಕರಿಗೆ ಅನುಕೂಲಕರ ಪ್ರಯಾಣ ಸೌಲಭ್ಯ ಒದಗಿಸಲು ಓಮ್ನಿಚಾನಲ್ ಪೇಮೆಂಟ್ಸ್ ಪೂರೈಕೆದಾರ ಸಂಸ್ಥೆಯಾದ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಕಂಪನಿಯು, ಆರ್‌ಬಿಎಲ್‌ ಬ್ಯಾಂಕ್ ಸಹಭಾಗಿತ್ವದಡಿ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕಾಗಿ (ಬಿಎಂಆರ್‌ಸಿಎಲ್) ಜೀರೊ-ಕೆವೈಸಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್‌ ಅನ್ನು (ಎನ್‌ಸಿಎಂಸಿ) ಬಿಡುಗಡೆ ಮಾಡಿದೆ.

ಕೆವೈಸಿ ಅಗತ್ಯವಿಲ್ಲದೆ ಈ ಕಾರ್ಡ್ ಅನ್ನು ಸಕ್ರಿಯಗೊಳಿಸಬಹುದಾಗಿದೆ. ಹಾಗಾಗಿ, ಬಳಕೆದಾರರಿಗೆ ಈ ಕಾರ್ಡ್‌ ಅನ್ನು ತ್ವರಿತವಾಗಿ ವಿತರಿಸಬಹುದಾಗಿದೆ. ಪ್ರಯಾಣಿಕರು ಗರಿಷ್ಠ ₹2,000 ಅನ್ನು ಟಾಪ್ ಅಪ್ ಮಾಡಬಹುದು. ಈ ಕಾರ್ಡ್ ಅನ್ನು ಮೆಟ್ರೊ, ಬಸ್, ವಾಟರ್ ಮೆಟ್ರೊ, ಪಾರ್ಕಿಂಗ್ ಮತ್ತು ಟೋಲ್‌ನಂತಹ ಎಲ್ಲ ಟಚ್ ಪಾಯಿಂಟ್‌ಗಳಲ್ಲಿ ಬಳಸಬಹುದು.

‘ಪ್ರಯಾಣಿಕರು ಬೆಂಗಳೂರು ಮೆಟ್ರೊ ನಿಲ್ದಾಣಗಳಲ್ಲಿನ ಟಿಕೆಟ್ ಕೌಂಟರ್‌ಗಳಿಂದ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ವಿತರಣೆ ಮಾಡುವ ಜೀರೊ ಕೆವೈಸಿ ಎನ್‌ಸಿಎಂಸಿಗಳನ್ನು ಖರೀದಿಸಬಹುದಾಗಿದೆ. ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ನ ನಿರ್ದೇಶನಕ್ಕೆ ಅನುಗುಣವಾಗಿ ಈ ಕಾರ್ಡ್ ಬಿಡುಗಡೆ ಮಾಡಲಾಗಿದೆ’ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರವಿ ಬಿ. ಗೋಯಲ್ ಹೇಳಿದ್ದಾರೆ.

ADVERTISEMENT

ಕೇಂದ್ರ ಸರ್ಕಾರದ ‘ಒಂದು ಕಾರ್ಡ್; ಒಂದು ದೇಶ ಯೋಜನೆ’ಗೆ ಅನುಗುಣವಾಗಿ ಈ ಕಾರ್ಡ್‌ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯು ದೇಶದ ಸಾರಿಗೆ ಕ್ಷೇತ್ರದ ಭವಿಷ್ಯದಲ್ಲಿ ಬದಲಾವಣೆ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಪ್ರಸ್ತುತ ಕ್ಲೋಸ್ಡ್-ಲೂಪ್ ಟ್ರಾನ್ಸಿಟ್ ಕಾರ್ಡ್‌ಗಳನ್ನು ಭಾರತದಲ್ಲಿ ಮೆಟ್ರೊ ಅಥವಾ ಬಸ್ ಸಂಚಾರಕ್ಕೆ ನಿರ್ದಿಷ್ಟವಾಗಿ ಬಳಸಲಾಗುತ್ತದೆ. ಆದರೆ, ಎನ್‌ಸಿಎಂಸಿಗಳನ್ನು ದೇಶದಾದ್ಯಂತ ಇರುವ ಎಲ್ಲ ಎನ್‌ಸಿಎಂಸಿ ಲಭ್ಯ ಇರುವ ಸ್ಥಳಗಳಲ್ಲಿ ಬಳಸಬಹುದಾಗಿದೆ. ಇದು ಗ್ರಾಹಕರಿಗೆ ಕೆವೈಸಿ ವೆರಿಫಿಕೇಷನ್ ತೊಂದರೆಯಿಂದ ಮುಕ್ತಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.