ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ (ಬಿಒಐ) 2024–25ರ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹2,374 ಕೋಟಿ ನಿವ್ವಳ ಲಾಭ ಗಳಿಸಿದೆ.
2023–24ರ ಇದೇ ಅವಧಿಯಲ್ಲಿ ₹1,458 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 63ರಷ್ಟು ಏರಿಕೆಯಾಗಿದೆ ಎಂದು ಬ್ಯಾಂಕ್ ಸೋಮವಾರ ತಿಳಿಸಿದೆ.
ಕಳೆದ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ವರಮಾನವು ₹16,659 ಕೋಟಿಯಾಗಿತ್ತು. ಈ ಬಾರಿ ₹19,872 ಕೋಟಿಯಷ್ಟಾಗಿದೆ. ನಿವ್ವಳ ಬಡ್ಡಿ ವರಮಾನವು ಶೇ 4ರಷ್ಟು ಏರಿಕೆಯಾಗಿದ್ದು, ₹5,986 ಕೋಟಿಯಾಗಿದೆ.
ಬಡ್ಡಿಯಲ್ಲದ ವರಮಾನವು ಶೇ 49ರಷ್ಟು ಹೆಚ್ಚಳವಾಗಿದ್ದು, ₹2,518 ಕೋಟಿಯಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹1,688 ಕೋಟಿ ಯಷ್ಟಿತ್ತು ಎಂದು ಬ್ಯಾಂಕ್ ತಿಳಿಸಿದೆ.
ಎನ್‌ಎಂಡಿಸಿ ಲಾಭ ಶೇ 16ರಷ್ಟು ಏರಿಕೆ
ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮವು (ಎನ್‌ಎಂಡಿಸಿ) 2024–25ರ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದ ಲಾಭದಲ್ಲಿ ಶೇ 16.6ರಷ್ಟು ಏರಿಕೆಯಾಗಿದೆ.
2023–24ರ ಇದೇ ಅವಧಿಯಲ್ಲಿ ₹1,024 ಕೋಟಿ ಲಾಭ ಗಳಿಸಿತ್ತು. ಈ ಬಾರಿ ₹1,195 ಕೋಟಿ ಆಗಿದೆ. ಹೆಚ್ಚಿನ ವರಮಾನದಿಂದ ಲಾಭದ ಪ್ರಮಾಣ ಏರಿಕೆಯಾಗಿದೆ ಎಂದು ನಿಗಮವು ಸೋಮವಾರ ಷೇರುಪೇಟೆಗೆ ತಿಳಿಸಿದೆ.
ವರಮಾನವು ಶೇ 22ರಷ್ಟು ಏರಿಕೆಯಾಗಿದ್ದು, ₹5,279 ಕೋಟಿ ಗಳಿಸಿದೆ. ಆಡಳಿತ ಮಂಡಳಿಯು 2:1 ಬೋನಸ್ ಷೇರು ನೀಡಲು ಅನುಮೋದನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.