ಮುಂಬೈ: 2023–24ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಮಹಾರಾಷ್ಟ್ರದ (ಬಿಒಎಂ) ನಿವ್ವಳ ಲಾಭದಲ್ಲಿ ಶೇ 45ರಷ್ಟು ಏರಿಕೆಯಾಗಿದ್ದು, ಒಟ್ಟು ₹1,218 ಕೋಟಿ ಗಳಿಸಿದೆ.
ವಸೂಲಾಗದ ಸಾಲದ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಹಾಗೂ ಬಡ್ಡಿ ವರಮಾನದಲ್ಲಿ ಹೆಚ್ಚಳ ಆಗಿರುವುದರಿಂದ ಲಾಭದಲ್ಲಿ ಹೆಚ್ಚಳವಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್ ₹840 ಕೋಟಿ ಲಾಭ ಗಳಿಸಿತ್ತು. 2023–24ರ ಪೂರ್ಣ ಆರ್ಥಿಕ ವರ್ಷದಲ್ಲಿ ನಿವ್ವಳ ಲಾಭವು ಶೇ 55ರಷ್ಟು ಏರಿಕೆಯಾಗಿದ್ದು, ಒಟ್ಟು ₹4,055 ಕೋಟಿ ಗಳಿಸಿದೆ.
ಮಾರ್ಚ್ ತ್ರೈಮಾಸಿಕದಲ್ಲಿ ಬಡ್ಡಿ ವರಮಾನವು ಶೇ 18.17ರಷ್ಟು ಏರಿಕೆಯಾಗಿದ್ದು, ₹2,548 ಕೋಟಿ ಗಳಿಸಿದೆ. ಪೂರ್ಣ ಆರ್ಥಿಕ ವರ್ಷದಲ್ಲಿ ₹5,467 ಕೋಟಿ ಬಡ್ಡಿ ವರಮಾನ ಗಳಿಸಿದೆ. ಬಡ್ಡಿಯೇತರ ವರಮಾನವು ಶೇ 24ರಷ್ಟು ಹೆಚ್ಚಳವಾಗಿದ್ದು, ₹1,022 ಕೋಟಿ ಆಗಿದೆ.
ವಸೂಲಾಗದ ಸಾಲದ ಸರಾಸರಿ ಪ್ರಮಾಣವು ಶೇ 2.47ರಿಂದ ಶೇ 1.88ಕ್ಕೆ ಇಳಿಕೆಯಾಗಿದೆ. ನಿವ್ವಳ ಎನ್‌ಪಿಸಿ ಶೇ 0.25ರಿಂದ ಶೇ 0.20ಕ್ಕೆ ಕುಗ್ಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.