ಬೆಂಗಳೂರು: ಅನ್‌ಲೈನ್ ಮೂಲಕ ಪ್ರಯಾಣ ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವ ಅಮೆರಿಕದ ಬುಕಿಂಗ್ ಹೋಲ್ಡಿಂಗ್ಸ್ ಕಂಪನಿಯು ಬೆಂಗಳೂರಿನಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಿದ್ದು, ಬುಧವಾರ ಉದ್ಘಾಟನೆ ಆಗಲಿದೆ.
ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಬುಕಿಂಗ್ ಹೋಲ್ಡಿಂಗ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಉತ್ಕೃಷ್ಟತಾ ಕೇಂದ್ರದ ಮುಖ್ಯಸ್ಥ ರಣಧೀರ್ ಬಿಂದ್ರಾ, ‘ಕಂಪನಿಯು ಭಾರತದಲ್ಲಿ ಆರಂಭಿಸುತ್ತಿರುವ ಮೊದಲ ಕೇಂದ್ರ ಇದಾಗಿದ್ದು, ಜಾಗತಿಕವಾಗಿ ಎರಡನೆಯದ್ದಾಗಿದೆ’ ಎಂದು ಮಾಹಿತಿ ನೀಡಿದರು. ಕಂಪನಿಯ ಮೊದಲ ಕೇಂದ್ರವು ರೊಮಾನಿಯಾದಲ್ಲಿದೆ.
ಬೆಂಗಳೂರಿನ ಬೆಳ್ಳಂದೂರಿನಲ್ಲಿ 48,500 ಚದರ ಅಡಿ ವಿಸ್ತೀರ್ಣದಲ್ಲಿ ಈ ಕೇಂದ್ರ ಸ್ಥಾಪಿಸಲಾಗಿದೆ. ಇದಕ್ಕಾಗಿ ₹2,084 ಕೋಟಿ ಹೂಡಿಕೆ ಮಾಡಲಾಗಿದೆ. ಸದ್ಯ 320 ಸಿಬ್ಬಂದಿ ಇದ್ದು, 2026ರ ವೇಳೆಗೆ ಒಟ್ಟು ಸಿಬ್ಬಂದಿ ಸಂಖ್ಯೆಯನ್ನು 1 ಸಾವಿರಕ್ಕೆ ಹೆಚ್ಚಿಸಲಾಗುವುದು. ಕಂಪನಿಯ ಬ್ರ್ಯಾಂಡ್‌ಗಳಿಗೆ ಅಗತ್ಯವಾದ ಬೆಂಬಲ ನೀಡುವುದರ ಜೊತೆಗೆ ಫಿನ್‌ಟೆಕ್, ಹಣಕಾಸು ಸೇವೆಗಳು, ಸೈಬರ್ ಭದ್ರತೆ ವಿಷಯಗಳ ಬಗ್ಗೆ ಈ ಕೇಂದ್ರವು ಗಮನ ಹರಿಸಲಿದೆ. ಯಾವುದೇ ಸಮಸ್ಯೆಗಳಿಲ್ಲದೇ, ಆರಾಮವಾಗಿ ಪ್ರಯಾಣಿಸುವಂತೆ ಮಾಡಲು ಅಗತ್ಯವಾದ ಡಿಜಿಟಲ್ ಸೌಲಭ್ಯಗಳನ್ನು ಒದಗಿಸಲು ಈ ಕೇಂದ್ರವು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕೋವಿಡ್ ಸಾಂಕ್ರಾಮಿಕದ ಬಳಿಕ ಪ್ರಯಾಣ ಉದ್ಯಮವು ಮತ್ತೆ ಬೇಡಿಕೆ ಕಂಡುಕೊಂಡಿದೆ. ಜಗತ್ತಿನಾದ್ಯಂತ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಈ ಹೂಡಿಕೆ ಮಾಡಲಾಗಿದೆ. ಈ ಕೇಂದ್ರವು ಕಂಪನಿಯ ಬೆಳವಣಿಗೆ, ಗುರಿ ಸಾಧನೆ ಮತ್ತು ಪ್ರಯಾಣ ಉದ್ಯಮದ ಭವಿಷ್ಯದಲ್ಲಿ ಯೋಜನೆಗಳನ್ನು ರೂಪಿಸಲು ನೆರವಾಗಲಿದೆ ಎಂದರು.
ಬೆಂಗಳೂರೇ ಏಕೆ ಎನ್ನುವ ಪ್ರಶ್ನೆಗೆ, ‘ಹಲವು ಆಯಾಮಗಳನ್ನು ಗಮನದಲ್ಲಿ ಇಟ್ಟುಕೊಂಡು ಬೆಂಗಳೂರಿನಲ್ಲಿ ಕೇಂದ್ರ ಸ್ಥಾಪಿಸುವ ನಿರ್ಧಾರಕ್ಕೆ ಬರಲಾಯಿತು. ಮುಖ್ಯವಾಗಿ ವಿಶ್ವದರ್ಜೆಯ ತಂತ್ರಜ್ಞಾನ, ಕೌಶಲಯುಕ್ತ ಮಾನವ ಸಂಪನ್ಮೂಲ, ಡಿಜಿಟಲ್ ಮೂಲಸೌಕರ್ಯ ಮತ್ತು ಕಚೇರಿ ಸ್ಥಾಪನೆಗೆ ಅಗತ್ಯವಾದ ಮೂಲಸೌಕರ್ಯ ಇಲ್ಲಿ ಅತ್ಯುತ್ತಮವಾಗಿವೆ’ ಎಂದು ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.
ಕಂಪನಿಯು 220ಕ್ಕೂ ಅಧಿಕ ದೇಶಗಳಲ್ಲಿ ವಹಿವಾಟು ನಡೆಸುತ್ತಿದ್ದು, ಅಗೋಡಾ, ಪ್ರೈಸ್‌ಲೈನ್, ರೆಂಟಲ್‌ಕಾರ್ಸ್ ಡಾಟ್ ಕಾಂ, ಕಯಾಕ, ಬುಕಿಂಗ್ ಡಾಟ್ ಕಾಂ ಮತ್ತು ಓಪನ್ ಟೇಬಲ್ ಹೀಗೆ ಪ್ರಮುಖ ಆರು ಬ್ರ್ಯಾಂಡ್‌ಗಳ ಮೂಲಕ ಕಾರ್ಯಾಚರಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.