ಬೆಂಗಳೂರು: ಬಾಷ್ ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಿನ ನಾಲ್ಕರಿಂದ ಐದು ವರ್ಷಗಳ ಅವಧಿಯಲ್ಲಿ ಒಟ್ಟು ₹ 1,000 ಕೋಟಿ ಹೂಡಿಕೆ ಮಾಡಲಿದೆ ಎಂದು ಬಾಷ್ ಸಮೂಹದ ಭಾರತದ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ತಿಳಿಸಿದರು.
‘ಇದಲ್ಲದೆ, ಡಿಜಿಟಲ್ ಮೊಬಿಲಿಟಿ ಕ್ಷೇತ್ರದಲ್ಲಿ ಹೆಚ್ಚುವರಿಯಾಗಿ ₹ 1,000 ಕೋಟಿ ಹೂಡಿಕೆ ಮಾಡಲಾಗುವುದು’ ಎಂದು ರಾಬರ್ಟ್ ಬಾಷ್ ಕಂಪನಿಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ಸ್ಟೆಫನ್ ಹರ್ಟಂಗ್ ಹೇಳಿದರು.
ಬಾಷ್ ಕಂಪನಿಯು ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿ ನೂರು ವರ್ಷಗಳು ಸಂದಿರುವ ಆಚರಣೆಯ ಭಾಗವಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಟ್ಟಾಚಾರ್ಯ ಮತ್ತು ಹರ್ಟಂಗ್ ಮಾತನಾಡಿದರು. ಕಳೆದ ಒಂದು ದಶಕದಲ್ಲಿ ದೇಶದಲ್ಲಿ ₹ 9 ಸಾವಿರ ಕೋಟಿಗಿಂತ ಹೆಚ್ಚು ಹಣವನ್ನು ಬಾಷ್ ಹೂಡಿಕೆ ಮಾಡಿದೆ ಎಂದು ಭಟ್ಟಾಚಾರ್ಯ ತಿಳಿಸಿದರು.
ಕಂಪನಿಯ ಭವಿಷ್ಯದ ಕೆಲವು ಚಟುವಟಿಕೆಗಳ ಬಗ್ಗೆ ಮಾತನಾಡಿದ ಭಟ್ಟಾಚಾರ್ಯ, ‘2030ರೊಳಗೆ ಬಾಷ್ ಕಂಪನಿಯು ಭೂಭರ್ತಿ ಜಾಗಗಳಿಗೆ ತ್ಯಾಜ್ಯ ಸುರಿಯವ ಪರಿಪಾಠವನ್ನು ಸಂಪೂರ್ಣವಾಗಿ ಕೈಬಿಡಲಿದೆ’ ಎಂದರು. 1953ರಿಂದಲೂ ಕಂಪನಿಯು ‘ಭಾರತದಲ್ಲೇ ತಯಾರಿಸಿ’ ತತ್ವವನ್ನು ಪಾಲಿಸಿಕೊಂಡು ಬಂದಿದೆ. ಅಲ್ಲದೆ, ಜರ್ಮನಿಯ ಹೊರಗೆ ಬಾಷ್ ಕಂಪನಿಯು ಅತಿದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಹೊಂದಿರುವುದು ಭಾರತದಲ್ಲಿ ಎಂದು ಮಾಹಿತಿ ನೀಡಿದರು.
ದೇಶದಲ್ಲಿನ ಘಟಕಗಳಿಂದ ದೇಶಿ ಮಾರುಕಟ್ಟೆಯ ಬೇಡಿಕೆಗಳಿಗೆ ಸ್ಪಂದಿಸಲು ಆದ್ಯತೆ ನೀಡಲಾಗುತ್ತದೆ. ಅದರ ಜೊತೆಯಲ್ಲಿಯೇ ರಫ್ತು ವಿಚಾರವಾಗಿಯೂ ಗಮನ ನೀಡಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಾಷ್ ಕಂಪನಿಯು ಭಾರತದಲ್ಲಿ ಮೊದಲ ಮಾರಾಟ ಏಜೆನ್ಸಿಯನ್ನು ಆರಂಭಿಸಿದ್ದು 1922ರಲ್ಲಿ. ಅದನ್ನು ಕಲ್ಕತ್ತಾದಲ್ಲಿ (ಇಂದಿನ ಕೋಲ್ಕತ್ತ) ಆರಂಭಿಸಲಾಯಿತು. 1953ರಲ್ಲಿ ಕಂಪನಿಯು ಬೆಂಗಳೂರಿನಲ್ಲಿ ತಯಾರಿಕಾ ಘಟಕವನ್ನು ಆರಂಭಿಸಿತು. ಕಂಪನಿಯು ದೇಶದ ಎಂಟು ರಾಜ್ಯಗಳಲ್ಲಿ ಈಗ 18 ಕಾರ್ಖಾನೆಗಳನ್ನು ಹೊಂದಿದೆ. ಒಟ್ಟು 32 ಸಾವಿರ ಜನರಿಗೆ ಉದ್ಯೋಗ ನೀಡಿದೆ ಎಂದು ಹರ್ಟಂಗ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.