ನವದೆಹಲಿ: ಭಾರತದ ಬೇಡಿಕೆಗೆ ಅನುಗುಣವಾಗಿ ಅಗತ್ಯವಿರುವ ಉದ್ದು ಮತ್ತು ತೊಗರಿ ಬೇಳೆ ಪೂರೈಕೆಯಲ್ಲಿ ಬ್ರೆಜಿಲ್ ಪ್ರಮುಖ ದೇಶವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಬ್ರೆಜಿಲ್‌ನ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿ ಜೂಲಿಯೊ ಸೀಸರ್ ರಾಮೋಸ್ ನೇತೃತ್ವದ ನಿಯೋಗವು ಗುರುವಾರ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ಅವರನ್ನು ಭೇಟಿ ಮಾಡಿ, ಆಮದು ಕುರಿತಂತೆ ಚರ್ಚಿಸಿತು.
ಕಳೆದ ವರ್ಷ ಬ್ರೆಜಿಲ್‌ನಿಂದ 4,102 ಟನ್‌ನಷ್ಟು ಉದ್ದು ಆಮದು ಮಾಡಿಕೊಳ್ಳಲಾಗಿತ್ತು. ಪ್ರಸಕ್ತ ವರ್ಷದ ಅಕ್ಟೋಬರ್ ಅಂತ್ಯದವರೆಗೆ 22 ಸಾವಿರ ಟನ್ ಆಮದು ಮಾಡಿಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ಬೇಳೆಕಾಳು ಬಿತ್ತನೆ ಅವಧಿಯಲ್ಲಿಯೇ ಬ್ರೆಜಿಲ್ ಮತ್ತು ಆಸ್ಟ್ರೇಲಿಯಾದಲ್ಲೂ ಬಿತ್ತನೆ ಮಾಡಲಾಗುತ್ತದೆ. ಹಾಗಾಗಿ, ಇಲ್ಲಿನ ಫಸಲಿನ ಇಳುವರಿಯನ್ನು ಅವಲೋಕಿಸಿ ಆ ದೇಶಗಳಲ್ಲಿ ಬಿತ್ತನೆ ಮಾಡಲಾಗುತ್ತದೆ. ಹಾಗಾಗಿ, ದೇಶೀಯವಾಗಿ ಬೇಳೆಕಾಳುಗಳ ಕೊರತೆ ಎದುರಾದಾಗ ಅಲ್ಲಿಂದ ಆಮದು ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ವಿವರಿಸಿದೆ.
ಹಿಂಗಾರು ಅವಧಿಯಲ್ಲಿ ದೇಶದಲ್ಲಿ ಕಡಲೆ ಕಾಳು ಉತ್ಪಾದನೆ ಕಡಿಮೆಯಾಗಲಿದೆ ಎಂದು ಅಂದಾಜಿಸಿದ್ದ ಕೇಂದ್ರ ಸರ್ಕಾರವು, ಮೇ ತಿಂಗಳಿನಲ್ಲಿ ಕಡಲೆ ಕಾಳು ಮೇಲಿನ ಆಮದು ಸುಂಕವನ್ನು ಹಿಂಪಡೆಯಿತು. ಹಾಗಾಗಿ, ಆಸ್ಟ್ರೇಲಿಯಾದಲ್ಲಿ ಕಡಲೆ ಬಿತ್ತನೆ ಪ್ರದೇಶದಲ್ಲಿ ಏರಿಕೆಯಾಗಿದೆ. ಅಲ್ಲಿ ಕಳೆದ ವರ್ಷ 4.9 ಲಕ್ಷ ಟನ್ ಉತ್ಪಾದನೆಯಾಗಿತ್ತು. ಈ ಬಾರಿ 13.3 ಲಕ್ಷ ಟನ್ ಹೆಚ್ಚಳವಾಗುವ ನಿರೀಕ್ಷೆಯಿದೆ. ಭಾರತಕ್ಕೆ ರಫ್ತು ಮಾಡುವ ಉದ್ದೇಶದಿಂದಲೂ ಅಲ್ಲಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ ಎಂದು ಸಚಿವಾಲಯ ವಿವರಿಸಿದೆ.
ಪ್ರತಿ ವರ್ಷ ಭಾರತವು ದೇಶೀಯ ಬೇಡಿಕೆಗೆ ಅನುಗುಣವಾಗಿ 3ರಿಂದ 4 ದಶಲಕ್ಷ ಟನ್‌ನಷ್ಟು ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.