ಬೆಂಗಳೂರು: ನಗರದ ರಿಯಲ್ ಎಸ್ಟೇಟ್ ಕಂಪನಿ ಬ್ರಿಗೇಡ್ ಎಂಟರ್‌ಪ್ರೈಸಸ್, 2019–20ನೇ ಹಣಕಾಸು ವರ್ಷದಲ್ಲಿ ವಸತಿ, ಕಚೇರಿ, ರಿಟೇಲ್ ಮತ್ತು ಹೋಟೆಲ್ ವಹಿವಾಟಿನಲ್ಲಿ ಉತ್ತಮ ಹಣಕಾಸು ಸಾಧನೆ ದಾಖಲಿಸಿದೆ.
‘2018–19ರಲ್ಲಿನ 29 ಲಕ್ಷ ಚದರ ಅಡಿ ಮಾರಾಟಕ್ಕೆ ಹೋಲಿಸಿದರೆ 2019–20ರಲ್ಲಿ 43 ಲಕ್ಷ ಚದರ ಅಡಿಗಳಷ್ಟು ಮಾರಾಟ ನಡೆದು ಶೇ 44ರಷ್ಟು ಏರಿಕೆ ದಾಖಲಾಗಿದೆ. ಲಾಕ್‌ಡೌನ್ ಸಡಿಲಿಕೆ ನಂತರ ವಸತಿ ವಹಿವಾಟಿನಲ್ಲಿ ಶೇ 30 ರಿಂದ ಶೇ 35ರಷ್ಟು ಸುಧಾರಣೆ ಕಂಡು ಬರುತ್ತಿದೆ. ಕಚೇರಿ ಸ್ಥಳಾವಕಾಶಕ್ಕೂ ಕ್ರಮೇಣ ಬೇಡಿಕೆ ಕುದುರುತ್ತಿದ್ದು, ಅದಿನ್ನೂ ಕಾರ್ಯರೂಪಕ್ಕೆ ಬರಬೇಕಾಗಿದೆ. ಲಾಕ್‌ಡೌನ್ ಮುಂಚಿನ ಅವಧಿಗೆ ಹೋಲಿಸಿದರೆ ಸದ್ಯಕ್ಕೆ ರಿಟೇಲ್ ವಹಿವಾಟು ಶೇ 15 ರಿಂದ ಶೇ 20ರಷ್ಟು ನಡೆಯುತ್ತಿದೆ’ ಎಂದು ಕಂಪನಿಯ ಅಧ್ಯಕ್ಷ ಎಂ. ಆರ್. ಜೈಶಂಕರ್ ಹೇಳಿದ್ದಾರೆ. ಶುಕ್ರವಾರ ನಡೆದ ಕಾಲ್ ಕಾನ್‌ಫೆರನ್ಸ್‌ನಲ್ಲಿ ಅವರು ಮಾತನಾಡುತ್ತಿದ್ದರು.
‘2019–20ರ ಹಣಕಾಸು ವರ್ಷದಲ್ಲಿನ ಒಟ್ಟಾರೆ ಮಾರಾಟ ವಹಿವಾಟು ₹ 2,376 ಕೋಟಿಗಳಷ್ಟಿದೆ. 2018ನೇ ಸಾಲಿನ ₹ 1,644 ಕೋಟಿ ವಹಿವಾಟಿಗೆ ಹೋಲಿಸಿದರೆ ಶೇ 45ರಷ್ಟು ಏರಿಕೆ ದಾಖಲಾಗಿದೆ’ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಅತುಲ್ ಗೋಯಲ್ ಅವರು ಮಾಹಿತಿ ನೀಡಿದ್ದಾರೆ.
ಹೊಸ ಯೋಜನೆ: ಪ್ರಸಕ್ತ ಹಣಕಾಸು ವರ್ಷದಲ್ಲಿ (2020–21) ಹಲವಾರು ಸವಾಲುಗಳಿದ್ದರೂ ಬೆಂಗಳೂರಿನಲ್ಲಿ ಎರಡು ಕೈಗೆಟುಕುವ ವಸತಿ ಯೋಜನೆಗಳೂ ಸೇರಿದಂತೆ ಹೈದರಾಬಾದ್ ಮತ್ತು ಚೆನ್ನೈನಲ್ಲಿ 12 ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.