ಜೂನ್ 12ರಂದು ಪೆಟ್ರೋಲ್ ದರವು ₹100ರ ಗಡಿ ತಲುಪುವ ಮೂಲಕ, ಕರ್ನಾಟಕವು ಈ ಗಡಿಯನ್ನು ತಲುಪಿದ ದೇಶದ ಏಳನೆಯ ರಾಜ್ಯವೆನಿಸಿತು. ಬೀದರ್, ಬಳ್ಳಾರಿ, ಕೊಪ್ಪಳ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆಯು ₹100ರ ಗಡಿಯನ್ನು ದಾಟಿದೆ. ಗ್ರಾಹಕರು ಪ್ರತಿ ಲೀಟರ್‌ಗೆ ನೀಡುವ ದರದಲ್ಲಿ ಶೇ 60ಕ್ಕೂ ಹೆಚ್ಚು ಪ್ರಮಾಣವು ತೆರಿಗೆಯ ರೂಪದ್ದಾಗಿದೆ ಎಂಬ ಕಾರಣಕ್ಕೆ, ಪೆಟ್ರೋಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಬೇಕು ಮತ್ತು ತೈಲವನ್ನೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಬೇಕು ಎಂಬ ಕೂಗು ಇತ್ತೀಚೆಗೆ ಬಲವಾಗುತ್ತಿದೆ.
2021ರ ಜೂನ್ 1ರಂದು ಒಂದು ಲೀಟರ್ ಕಚ್ಚಾ ತೈಲದ ದರವು ₹ 32.40ರಷ್ಟಿತ್ತು. ಒಂದು ಲೀಟರ್ ಕಚ್ಚಾ ತೈಲವನ್ನು ಸಂಸ್ಕರಿಸಿ ಪೆಟ್ರೋಲ್ ಪಂಪ್‌ವರೆಗೆ ಸಾಗಿಸಲು ಸುಮಾರು ₹3.60 ವೆಚ್ಚ ಬರುತ್ತದೆ. ಅಂದರೆ ಪೆಟ್ರೋಲ್ ಪಂಪ್‌ಗೆ ಬರುವಾಗ ಒಂದು ಲೀಟರ್ ಪೆಟ್ರೋಲ್‌ನ ದರವು ಸುಮಾರು ₹ 36 ಆಗಿರುತ್ತದೆ. ಈ ಹಂತದಿಂದ ತೆರಿಗೆಗಳ ಜೋಡಣೆ ಆರಂಭವಾಗುತ್ತದೆ. ಎಕ್ಸೈಸ್ ಸುಂಕ, ಹೆಚ್ಚುವರಿ ಎಕ್ಸೈಸ್ ಸುಂಕ, ಕೃಷಿ ಸೆಸ್, ರಸ್ತೆ ಮತ್ತು ಮೂಲಸೌಲಭ್ಯ ಸೆಸ್ ರೂಪದಲ್ಲಿ ಕೇಂದ್ರ ಸರ್ಕಾರವು ಒಟ್ಟು ₹32.90 ಪಡೆಯುತ್ತದೆ. ಇದಕ್ಕೆ ಡೀಲರ್‌ಗಳ ಕಮಿಷನ್ ₹3.80 ಸೇರಿದಾಗ, ಪೆಟ್ರೋಲ್ ದರವು ಲೀಟರ್‌ಗೆ ₹72.68ರಷ್ಟಾಗುತ್ತದೆ.
ಇನ್ನು ರಾಜ್ಯ ಸರ್ಕಾರದ ಸರದಿ. ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಹಾಗೂ ಇತರ ತೆರಿಗೆಗಳನ್ನು ರಾಜ್ಯಗಳೂ ವಿಧಿಸುತ್ತವೆ. ಪೆಟ್ರೋಲ್ ಮೇಲೆ ಶೇ 35ರಷ್ಟು ವ್ಯಾಟ್ ವಿಧಿಸುವ ಮೂಲಕ ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ವ್ಯಾಟ್ ವಿಧಿಸುವ ರಾಜ್ಯವೆನಿಸಿದೆ. ಇದು ಸುಮಾರು ₹25.40ರಷ್ಟಾಗುತ್ತದೆ. ಎಲ್ಲಾ ಸೇರಿದಾಗ ಪೆಟ್ರೋಲ್ ದರ ಸುಮಾರು ₹98 ಅಥವಾ ಅದಕ್ಕೂ ಹೆಚ್ಚಾಗುತ್ತದೆ (ಆಯಾ ರಾಜ್ಯದ ಸೆಸ್‌ಗೆ ಅನುಗುಣವಾಗಿ). ಗ್ರಾಹಕರು ತಮ್ಮ ವಾಹನದ ಟ್ಯಾಂಕ್ ತುಂಬಿಸುವಾಗ ಇಷ್ಟೆಲ್ಲವನ್ನೂ ಪಾವತಿಸಬೇಕು.
ಗ್ರಾಹಕರು ಒಟ್ಟಾರೆ ಪಾವತಿಸುವ ತೆರಿಗೆ ₹58.34 ಹಾಗೂ ಸಂಸ್ಕರಿತ ಪೆಟ್ರೋಲ್‌ನ ಮೂಲ ದರ ₹36ನ್ನು ಲೆಕ್ಕ ಹಾಕಿದಾಗ ತೆರಿಗೆಯ ಪ್ರಮಾಣವು ಶೇ 162ರಷ್ಟಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.
ತೈಲವನ್ನೂ ಜಿಎಸ್‌ಟಿ ಅಡಿ ತನ್ನಿ:ಪೆಟ್ರೋಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಆಗುವ ಪ್ರಮುಖ ಲಾಭವೆಂದರೆ ಗ್ರಾಹಕರಿಗೆ ಅದು ಕಡಿಮೆ ಬೆಲೆಗೆ ಲಭ್ಯವಾಗುತ್ತದೆ. ದುಬಾರಿ ತೈಲ ಬೆಲೆಯು ಅರ್ಥ ವ್ಯವಸ್ಥೆಗೆ ಹಲವು ವಿಧಗಳಲ್ಲಿ ಹಾನಿಯನ್ನುಂಟುಮಾಡುತ್ತದೆ. ವಿಶೇಷವಾಗಿ ಜನರ ಖರ್ಚುಮಾಡುವ ಶಕ್ತಿಯನ್ನೇ ಇದು ಕುಂದಿಸುತ್ತದೆ. ಕೋವಿಡ್ ಪಿಡುಗಿನಿಂದಾಗಿ ಜನರು ಕೆಲಸ ಕಳೆದುಕೊಂಡಿದ್ದಾರೆ ಅಥವಾ ಹಲವರ ಆದಾಯ ಕುಸಿತವಾಗಿದೆ. ಇದರಿಂದಾಗಿ ಬೇಡಿಕೆ ಕುಸಿದು, ಆರ್ಥಿಕತೆ ಸಂಕುಚಿತಗೊಂಡಿದೆ.
ಇಂಥ ಸಮಯದಲ್ಲಿ ಪೆಟ್ರೋಲ್‌ನಂಥ ಅಗತ್ಯ ವಸ್ತುವಿನ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ ಜನರನ್ನು ಪೀಡಿಸುವುದು ಅರ್ಥವ್ಯವಸ್ಥೆಗೆ ಇನ್ನಷ್ಟು ಹಾನಿ ಉಂಟುಮಾಡುತ್ತದೆ. ತೆರಿಗೆ ರೂಪದಲ್ಲಿ ಗ್ರಾಹಕರು ನೀಡುವ ಪ್ರತಿ ರೂಪಾಯಿಯೂ ವಾಸ್ತವದಲ್ಲಿ ಅವರು ತಮ್ಮ ಬಳಕೆಗಾಗಿ ಮಾಡುವ ವೆಚ್ಚವಾಗಿರುವುದಿಲ್ಲ. ಜನರು ವೆಚ್ಚ ಕಡಿಮೆ ಮಾಡಿದಾಗ ಇದಕ್ಕೆ ಪ್ರತಿಕ್ರಿಯೆಯಾಗಿ ತಯಾರಕರು ಉತ್ಪಾದನೆ ಕಡಿಮೆ ಮಾಡುತ್ತಾರೆ. ಜತೆಗೆ ತಮ್ಮಲ್ಲಿರುವ ಉದ್ಯೋಗಿಗಳ ಸಂಖ್ಯೆಯನ್ನೂ ಕಡಿತ ಮಾಡುತ್ತಾರೆ. ಇದು ಇನ್ನಷ್ಟು ಮಂದಿಯ ಆದಾಯ ಕಡಿತಕ್ಕೆ ಮತ್ತು ಖರೀದಿ ಪ್ರಮಾಣ ಇಳಿಕೆಗೆ ಕಾರಣವಾಗುತ್ತದೆ. ಆರ್ಥಿಕತೆಯು ಸಂಕುಚಿತ ಗೊಳ್ಳುತ್ತಿರುವ ಸಂದರ್ಭದಲ್ಲಿ ಜನರ ವೆಚ್ಚ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುವುದು ಸರಿಯಾದ ನೀತಿಯೇ ವಿನಾ, ಹೆಚ್ಚು ಹೆಚ್ಚು ತೆರಿಗೆ ವಿಧಿಸುವುದಲ್ಲ.
ಪೆಟ್ರೋಲ್ ದರ ಹೆಚ್ಚಾದರೆ ಸ್ವಂತ ವಾಹನಗಳನ್ನು ಹೊಂದಿರುವ, ಮಧ್ಯಮ ಮತ್ತು ಮೇಲ್ವರ್ಗದ ಜನರಿಗೆ ಮಾತ್ರ ತೊಂದರೆಯಾಗುತ್ತದೆಯೇ ವಿನಾ ಬಡವರಿಗಲ್ಲ ಎಂದು ತಪ್ಪಾಗಿ ಭಾವಿಸಲಾಗುತ್ತಿದೆ. ದುರದೃಷ್ಟವಶಾತ್ ಪೆಟ್ರೋಲ್ ದರ ಏರಿಕೆಯು ಜನಸಾಮಾನ್ಯರು ಬಳಸುವ ಎಲ್ಲಾ ಸರಕುಗಳ ಬೆಲೆ ಏರಿಕೆಗೆ ಮತ್ತು ಹಣದುಬ್ಬರಕ್ಕೆ ಕಾರಣವಾಗುತ್ತದೆ. ಉದಾಹರಣೆ ನೀಡಬೇಕೆಂದರೆ, ಸಾಗಾಣಿಕೆಯ ವೆಚ್ಚವು ಹೆಚ್ಚಾಗುವುದರಿಂದ ತರಕಾರಿ ಮತ್ತು ಇತರ ಅಗತ್ಯ ಆಹಾರ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಸಾರ್ವಜನಿಕ ಸಾರಿಗೆಯೂ ದುಬಾರಿಯಾಗುತ್ತದೆ. ಸ್ವಂತ ವಾಹನ ಇಲ್ಲದವರಿಗೆ ಇದು ಹೊರೆಯಾಗುತ್ತದೆ.
ಪೆಟ್ರೋಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಮುಖ್ಯವಾಗಿ ದರದಲ್ಲಿ ಸ್ಥಿರತೆ ಕಾಣಿಸುತ್ತದೆ. ಜತೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಣದ ಕೊರತೆ ಬಿದ್ದಾಗಲೆಲ್ಲಾ ಪೆಟ್ರೋಲ್ ಮೇಲಿನ ತೆರಿಗೆ ಹೆಚ್ಚಿಸುವ ಪ್ರಲೋಭನೆಗೆ ಬೀಳುವುದಕ್ಕೂ ತಡೆಬೀಳುತ್ತದೆ. ಸಿಗರೇಟು, ಮದ್ಯದಂತೆ ಪೆಟ್ರೋಲ್ ಸಹ ಸರ್ಕಾರಗಳಿಗೆ ಹಣವನ್ನು ತಂದುಕೊಡುವ ಕಾಮಧೇನುವಿನಂತಾಗಿದೆ. ಇವುಗಳ ದರವು ಎಷ್ಟೇ ಹೆಚ್ಚಿದರೂ ಜನರು ಖರೀದಿಸುವುದನ್ನು ನಿಲ್ಲಿಸುವುದಿಲ್ಲ.
ತನ್ನ ವೆಚ್ಚಗಳನ್ನು ನಿಭಾಯಿಸಲು ತೈಲದ ಮೇಲಿನ ತೆರಿಗೆಯನ್ನು ಅವಲಂಬಿಸಲಾಗುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾದರೆ ಆರ್ಥಿಕತೆಯಲ್ಲಿ ಒಂದಿಷ್ಟು ಶಿಸ್ತು ಮೂಡಿಸುವುದು ಸರ್ಕಾರಗಳಿಗೆ ಅನಿವಾರ್ಯವಾಗುತ್ತದೆ. ಅದಕ್ಕಾಗಿ ಸರ್ಕಾರಗಳು ತಮ್ಮ ವ್ಯರ್ಥ ವೆಚ್ಚಗಳನ್ನು ಕಡಿತಗೊಳಿಸಬೇಕಾಗುತ್ತವೆ ಅಥವಾ ಬೇರೆ ಕಡೆಗಳಲ್ಲಿ ತೆರಿಗೆ ಸಂಗ್ರಹವನ್ನು ಉತ್ತಮಗೊಳಿಸುವತ್ತ ಗಮನಹರಿಸಬೇಕಾಗುತ್ತದೆ.
ಹೇಗೆ ಸಾಧ್ಯ?:ಭಾರಿ ಪ್ರಮಾಣದಲ್ಲಿ ಆದಾಯ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಪೆಟ್ರೋಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದಕ್ಕೆ ಪ್ರಬಲ ವಿರೋಧ ಬರುವುದು ಸರ್ಕಾರದಿಂದಲೇ. 2019–20ರಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ₹4.24 ಲಕ್ಷ ಕೋಟಿಯನ್ನು ಸಂಗ್ರಹಿಸಿವೆ. ಪೆಟ್ರೋಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ರಾಜ್ಯ ಸರ್ಕಾರಗಳೇ ಸುಮಾರು ₹2ಲಕ್ಷ ಕೋಟಿ ಆದಾಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಅವುಗಳು ಸಹ ತಮ್ಮ ಆದಾಯದ ಪ್ರಮುಖ ಮೂಲವನ್ನು ಬಿಟ್ಟುಕೊಡಲು ಸಿದ್ಧರಾಗಲಾರವು.
ಈ ಸ್ಥಿತ್ಯಂತರವನ್ನು ಸಾಧಿಸಲು ಇರುವ ಒಂದು ಮಾರ್ಗವೆಂದರೆ ಪೆಟ್ರೋಲ್ ಅನ್ನು ಗರಿಷ್ಠ ಸ್ಲ್ಯಾಬ್ ಅಡಿಗೆ (ಶೇ 28) ತರುವುದು. ಜತೆಗೆ, ಆದಾಯ ನಷ್ಟವನ್ನು ಸರಿದೂಗಿಸಲು ‘ಪರಿಹಾರ ಸೆಸ್’ ಅನ್ನು ವಿಧಿಸುವುದು. ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನಾಗಿ ಹಂಚಿಕೆ ಮಾಡಿಕೊಳ್ಳಬೇಕು. ಹಾಗೆ ಮಾಡಿದರೆ ರಾಜ್ಯಗಳೂ ಒಪ್ಪಿಗೆ ಸೂಚಿಸಬಹುದು. ಹಂತಹಂತವಾಗಿ ಇಳಿಕೆ ಮಾಡುವ ಸ್ಪಷ್ಟ ಹಾದಿಯನ್ನು ಸೂಚಿಸುವ ಮೂಲಕವೇ ಪರಿಹಾರ ಸೆಸ್ ಅನ್ನು ವಿಧಿಸಬೇಕು. ಉದಾಹರಣೆಗೆ, ಶೇ 30ರಷ್ಟು ಪರಿಹಾರ ಸೆಸ್ ವಿಧಿಸಿ, ಅದನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಶೇ 5ರಷ್ಟು ಇಳಿಕೆ ಮಾಡುತ್ತಲೇ ಬರಬೇಕು. ಹೀಗೆ ಮಾಡಿದರೆ 15 ವರ್ಷಗಳಲ್ಲಿ ಪರಿಹಾರ ಸೆಸ್ ಅನ್ನು ಪೂರ್ಣವಾಗಿ ರದ್ದು ಮಾಡಬಹುದು. ಇದರಿಂದ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ರಾಜ್ಯಗಳಿಗೆ ಸಾಕಷ್ಟು ಕಾಲಾವಕಾಶ ನೀಡಿದಂತೆ ಮತ್ತು ಆದಾಯ ಕೊರತೆಯನ್ನು ಸರಿದೂಗಿಸಲು ಉತ್ತಮ ಹಣಕಾಸು ತಂತ್ರ ರೂಪಿಸಲು ಅವಕಾಶ ನೀಡಿದಂತಾಗುತ್ತದೆ.
ಪೆಟ್ರೋಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಅನೇಕ ಲಾಭಗಳಿವೆ. ಗ್ರಾಹಕರ ಕೈಯಲ್ಲಿ ವೆಚ್ಚ ಮಾಡಲು ಹೆಚ್ಚಿನ ಹಣ ಇರುತ್ತದೆ. ಇದು ಹೆಚ್ಚು ತೆರಿಗೆ ವಿಧಿಸುವುದರಿಂದ ಆಗುವ ಲಾಭಕ್ಕಿಂತಲೂ ಹೆಚ್ಚಿನ ಲಾಭವನ್ನು ಅರ್ಥವ್ಯವಸ್ಥೆಯ ಮೇಲೆ ಉಂಟುಮಾಡಬಲ್ಲದು.
ಲೇಖಕ: ತಕ್ಷಶಿಲಾ ಇನ್‌ಸ್ಟಿಟ್ಯೂಟ್‌ನಲ್ಲಿ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.